ಜಿನೇವಾ, ಸೆ 22 (DaijiworldNews/DB): ಹೃದಯ ತೊಂದರೆ, ಕ್ಯಾನ್ಸರ್, ಮಧುಮೇಹ ಮತ್ತು ಉಸಿರಾಟದ ಕಾಯಿಲೆಗಳಿಂದಾಗಿ ಜಗತ್ತಿನಲ್ಲಿ ಪ್ರತಿ ಎರಡು ಸೆಕೆಂಡಿಗೊಬ್ಬರು 70 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳು ಸಾವನ್ನಪ್ಪುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಹೃದಯದ ತೊಂದರೆ, ಕ್ಯಾನ್ಸರ್, ಮಧುಮೇಹ, ಉಸಿರಾಟದ ತೊಂದರೆಯಂತಹ ದೀರ್ಘಕಾಲದ ತೊಂದರೆಗಳಿಂದ ಬಳಲುತ್ತಿರುವವರು ಇಡೀ ವಿಶ್ವದಲ್ಲೇ ಹೆಚ್ಚಿದ್ದಾರೆ. 70 ವರ್ಷಕ್ಕಿಂತ ಕೆಳಗಿನವರನ್ನು ಪ್ರತಿ ಎರಡು ಸೆಕೆಂಡಿಗೆ ಒಬ್ಬರನ್ನು ಈ ಕಾಯಿಲೆಗಳು ಬಲಿ ತೆಗೆದುಕೊಳ್ಳುತ್ತಿವೆ. ಇದರಲ್ಲಿ ಪ್ರತಿ ಹತ್ತು ಸಾವುಗಳ ಪೈಕಿ ಒಂಬತ್ತು ಮಂದಿ ಕಡಿಮೆ ಮತ್ತು ಮಧ್ಯಮ ಆದಾಯವಿರುವ ದೇಶವಾಸಿಗಳಾಗಿದ್ದಾರೆ ಎಂದು ಡಬ್ಲ್ಯೂಎಚ್ಓ ಮಾಹಿತಿ ನೀಡಿದೆ.
70 ವರ್ಷಕ್ಕಿಂತ ಕಡಿಮೆ ವಯಸ್ಸಿನ 17 ಮಿಲಿಯನ್ ಮಂದಿ ಪ್ರತಿವರ್ಷ ಎನ್ಸಿಡಿಗಳಿಂದಾಗಿ (ಸಾಂಕ್ರಾಮಿಕವಲ್ಲದ ಕಾಯಿಲೆ) ಜೀವ ಕಳೆದುಕೊಳ್ಳುತ್ತಿದ್ದಾರೆ. ಹೃದಯರೋಗ, ಪಾರ್ಶ್ವವಾಯು, ಕ್ಯಾನ್ಸರ್, ಮಧುಮೇಹ, ದೀರ್ಘಾವಧಿ ಉಸಿರಾಟ ತೊಂದರೆಗಳೇ ವಿಶ್ವದ ಮುಕ್ಕಾಲು ಭಾಗ ಸಾವುಗಳಿಗೆ ಕಾರಣವಾಗಿದೆ. 9.3 ಮಿಲಿಯನ್ ಕುಟುಂಬಗಳು ಅಂದರೆ ಆರು ಸಾವುಗಳ ಪೈಕಿ ಒಂದು ಸಾವು ಕ್ಯಾನ್ಸರ್ನಿಂದಾಗಿಯೇ ಪ್ರತಿ ವರ್ಷ ಸಂಭವಿಸುತ್ತಿದೆ ಎಂದು ವಿವರಿಸಿದೆ.
ಸಾಮಾಜಿಕ, ಪರಿಸರ, ವಾಣಿಜ್ಯ ಮತ್ತು ಜೆನಿಟೆಕ್ ಮುಂತಾದ ಕಾರಣಗಳಿಂದಾಗಿ ಈ ಎಲ್ಲಾ ಸಾವುಗಳು ಸಂಭವಿಸುತ್ತಿವೆ ಎಂದು ಡಬ್ಲ್ಯೂಎಚ್ಓ ಆತಂಕ ವ್ಯಕ್ತಪಡಿಸಿದೆ.