ಫೆ 10 (MSP): ವಿಜ್ಞಾನ ತಂತ್ರಜ್ಞಾನದಲ್ಲಿ ಗಣನೀಯವಾಗಿ ಸಾಧನೆಗೈದು, ಆಧುನಿಕ ಪ್ರಪಂಚದಲ್ಲಿ ಬದುಕುತ್ತಿದ್ದರೂ , ಸೌದಿ ಅರೇಬಿಯಾದಲ್ಲಿ ಮಾತ್ರ ಮಹಿಳೆ ಸೀಮಿತ ಸ್ವಾತಂತ್ರ್ಯದಲ್ಲಿ ಬದುಕುತ್ತಿದ್ದಾರೆ. ಅಲ್ಲಿ ಮಹಿಳೆಯೋರ್ವಳು ಪುರುಷರ ಅಧೀನದಲ್ಲಿಯೇ ಬದುಕಬೇಕು. ಕೆಲವು ಕಟ್ಟಪ್ಪಣೆಗಳನ್ನು ನಿರ್ಲಕ್ಷಿಸಿ ಬದುಕಬಾರದು ಎನ್ನುವ ನೀತಿಯಡಿಯಲ್ಲಿಯೇ ಮಹಿಳೆಯರ ಜೀವನ ಸಾಗಿಸುತ್ತಿದ್ದಾರೆ. ಈ ನಡುವೆ ಸೌದಿ ಅರೇಬಿಯಾದಲ್ಲಿ ಮಹಿಳೆಯರ ಚಲನವಲನವನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡುವ ಅಬ್ಶರ್ ಹೆಸರಿನ ಆ್ಯಪ್ ಒಂದಕ್ಕೆ ಪ್ಲೇಸ್ಟೋರ್ನಲ್ಲಿ ಅವಕಾಶ ನೀಡಿರುವುದಕ್ಕಾಗಿ ಆ್ಯಪಲ್ ಹಾಗೂ ಗೂಗಲ್ ಸಂಸ್ಥೆಗಳ ವಿರುದ್ಧ ಮಾನವ ಹಕ್ಕುಗಳ ಹೋರಾಟಗಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಅಬ್ಶರ್ ಆ್ಯಪ್ ಮೂಲಕ ತಮ್ಮ ಪತ್ನಿ ಎಲ್ಲಿದ್ದಾಳೆ ಎಂಬುದನ್ನು ಪುರುಷರು ತಿಳಿಯಬಹುದಾಗಿದೆ ಮಾತ್ರವಲ್ಲದೇ, ಪತ್ನಿ ಪ್ರಯಾಣ ಮಾಡಲು ಈ ಆ್ಯಪ್ ಮೂಲಕವೇ ಅನುಮತಿಯನ್ನೂ ನೀಡಬಹುದು. ಇಂತಹ ಆ್ಯಪ್ಗೆ ಗೂಗಲ್, ಆ್ಯಪಲ್ ಅವಕಾಶ ನೀಡಬಾರದು ಎಂದು ಮಾನವ ಹಕ್ಕುಗಳ ರಕ್ಷಣಾ ಸಂಸ್ಥೆ ಆಮ್ನೆಸ್ಟಿ ಇಂಟರ್ನ್ಯಾಷನಲ್ ಒತ್ತಾಯಿಸಿದೆ.
ವಿಶೇಷ ಎಂದರೆ ಈ ಆ್ಯಪ್ ನ್ನು ಖುದ್ದು ಸೌದಿ ಸರಕಾರ ಅಭಿವೃದ್ಧಿ ಪಡಿಸಿದ್ದು, ಮಹಿಳೆಯರು ಪುರುಷರ ಮೇಲ್ವಿಚಾರಣೆಯಲ್ಲಿ ಪ್ರಯಾಣ ಮಾಡುವುದು ಸೌದಿ ಅರೇಬಿಯಾದಲ್ಲಿ ಕಡ್ಡಾಯ ನಿಯಮವಾಗಿದೆ.