ಕಠ್ಮಂಡು,ಸೆ 23 (DaijiworldNews/MS): ಭಾರತಕ್ಕೆ ಅತಿ ದೊಡ್ಡ ಪ್ರಮಾನದಲ್ಲಿ ನಕಲಿ ನೋಟುಗಳ ಪೂರೈಕೆ ಮಾಡುತ್ತಿದ್ದ ಪಾಕಿಸ್ತಾನದ ಐಎಸ್ ಐ ಏಜೆಂಟ್ ನೇಪಾಳದಲ್ಲಿ ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಹತ್ಯೆಗೊಳಗಾಗಿದ್ದಾನೆ.
ಐಎಸ್ ಐ ಏಜೆಂಟ್ ಲಾಲ್ ಮೊಹಮದ್ (55) ಅಲಿಯಾಸ್ ಮೊಹಮದ್ ಧೀರಜ್ ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಸೆಪ್ಟೆಂಬರ್ 19ರಂದು ಹತ್ಯೆಗೊಳಗಾಗಿದ್ದಾನೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ತನ್ನ ಐಷಾರಾಮಿ ಕಾರಿನಲ್ಲಿ ಬಂದಿಳಿಯುತ್ತಿದ್ದಂತೆ ಹಿಂದಿನಿಂದ ಬಂದ ಬಂದೂಕುಧಾರಿಗಳು ಆತನ ಮೇಲೆ ಗುಂಡಿನ ಸುರಿಮಳೆಗೈದಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದರೂ ಆತನನ್ನು ಅಟ್ಟಾಡಿಸಿಕೊಂಡು ಹತ್ಯೆ ಮಾಡಿದ್ದಾರೆ.
ಪಾಕಿಸ್ತಾನ, ಬಾಂಗ್ಲಾದೇಶಗಳಲ್ಲಿ ತಯಾರಿಸುತ್ತಿದ್ದ ನಕಲಿ ನೋಟುಗಳನ್ನು ನೇಪಾಳಕ್ಕೆ ರವಾನಿಸಿ, ಅಲ್ಲಿಂದ ಭಾರತಕ್ಕೆ ತಲುಪಿಸುವ ಕೆಲಸವನ್ನು ಲಾಲ್ ಮೊಹಮದ್ ಮಾಡುತ್ತಿದ್ದ.
ಲಾಲ್ ಮೊಹಮದ್ ಕೇವಲ ಐಎಸ್ ಐ ಏಜೆಂಟ್ ಮಾತ್ರ ಆಗಿರಲಿಲ್ಲ. ಬದಲಾಗಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ಕೂಡ ನಂಟು ಹೊಂದಿದ್ದ ಎನ್ನಲಾಗಿದೆ.