ಬೀಜಿಂಗ್, ಸೆ 25 (DaijiworldNews/DB): ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರನ್ನು ಚೀನಾ ಸೇನೆ ಗೃಹ ಬಂಧನದಲ್ಲಿರಿಸಿದೆ ಎಂಬ ಪೋಸ್ಟ್ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದಕ್ಕೆ ಚೀನಾ ಸರ್ಕಾರ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಚೀನಾದ ಕಮ್ಯುನಿಸ್ಟ್ ಪಕ್ಷದ ವರಿಷ್ಠರು ಪೀಪಲ್ಸ್ ಲಿಬರೇಶನ್ ಆರ್ಮಿ ಮುಖ್ಯಸ್ಥ ಸ್ಥಾನದಿಂದ ಜಿನ್ ಪಿಂಗ್ ಅವರನ್ನು ವಜಾ ಮಾಡಿದ್ದಾರೆ. ಅಲ್ಲದೆ, ಸೇನೆಯು ಅವರನ್ನು ಗೃಹಬಂಧನದಲ್ಲಿರಿಸಿದೆ ಎಂಬುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ಗಳು ಹರಿದಾಡುತ್ತಿವೆ. ಚೀನಾದ ಮಾಜಿ ಅಧ್ಯಕ್ಷ ಹು ಜಿಂಟಾವೊ ಮತ್ತು ಮಾಜಿ ಪ್ರಧಾನಿ ವೆನ್ ಜಿಯಾಬಾವೊ ಅವರ ಆದೇಶದ ಹಿನ್ನೆಲೆಯಲ್ಲಿ ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂದೂ ಹೇಳಲಾಗುತ್ತಿದೆ. ಆದರೆ ಚೀನಾ ಸರ್ಕಾರ ಮತ್ತು ಮಾಧ್ಯಮಗಳು ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಇನ್ನು ಚೀನಾ ಅಧ್ಯಕ್ಷರನ್ನು ಗೃಹ ಬಂಧನದಲ್ಲಿರಿಸಲಾಗಿದೆ ಎಂಬ ಪೋಸ್ಟ್ ಕುರಿತು ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಅವರು ಟ್ವೀಟ್ ಮಾಡಿದ್ದು, ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ. ಕ್ಸಿ ಜಿನ್ ಪಿಂಗ್ ಗೃಹ ಬಂಧನದಲ್ಲಿರುವುದು ನಿಜವೇ? ಅಥವಾ ಇದೊಂದು ವದಂತಿಯೇ ಎಂಬುದನ್ನು ಶೀಘ್ರ ಬಹಿರಂಗಪಡಿಸಬೇಕು ಎಂದು ಅವರು ಚೀನಾ ಆಡಳಿತವನ್ನು ಒತ್ತಾಯಿಸಿದ್ದಾರೆ.