ಉಗಾಂಡಾ, ಸೆ 30 (DaijiworldNews/DB): ಉಗಾಂಡಾದಲ್ಲಿ ದಿನದಿಂದ ದಿನಕ್ಕೆ ಎಬೋಲಾ ಸೋಂಕಿನ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದ್ದು, ಈಗಾಗಲೇ ಐವರು ಇದಕ್ಕೆ ಬಲಿಯಾಗಿದ್ದಾರೆ.
ಐವರು ಎಬೋಲಾದಿಂದಾಗಿ ಸಾವನ್ನಪ್ಪಿರುವ ಬಗ್ಗೆ ಖುದ್ದು ಉಗಾಂಡಾದ ಅಧ್ಯಕ್ಷ ಯೊವೆರಿ ಮುಸೆವೆನಿ ಅವರೇ ಮಾಹಿತಿ ನೀಡಿದ್ದು, ಇನ್ನೂ 19 ಮಂದಿ ಇದರಿಂದಲೇ ಸಾವನ್ನಪ್ಪಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಮಾದರಿಗಳನ್ನು ಪಡೆಯಲಿಲ್ಲವಾದ್ದರಿಂದ ಈ ಸಾವು ಎಬೋಲಾದಿಂದಲೇ ಸಂಭವಿಸಿದೆಯೇ ಅಥವಾ ಬೇರೆ ಕಾರಣದಿಂದಲೋ ಎಂಬುದಾಗಿ ತಿಳಿದು ಬಂದಿಲ್ಲ. ಕೋವಿಡ್ ನಿರ್ವಹಣೆ ತೀರಾ ಕಷ್ಟವಾಗಿತ್ತು. ಆದರೆ ಅಷ್ಟು ತ್ರಾಸದಾಯಕ ನಿರ್ವಹಣೆ ಎಬೋಲಾದ ವಿಚಾರದಲ್ಲಿ ಇಲ್ಲದಿರುವುದರಿಂದ ಲಾಕ್ಡೌನ್ ಅಗತ್ಯವಿಲ್ಲ ಎಂದವರು ಪ್ರತಿಪಾದಿಸಿರುವುದಾಗಿ ವರದಿಯಾಗಿದೆ.
ಈ ಸೋಂಕು ಮಾರಣಾಂತಿಕವಾಗಿದ್ದು, ಜನ ಎಚ್ಚರಿಕೆ ವಹಿಸಬೇಕು. ಇದಕ್ಕೆ ಯಾವುದೇ ಲಸಿಕೆ ಇಲ್ಲ ಎಂದವರು ತಿಳಿಸಿದ್ದಾರೆ. ಕೈಗಳನ್ನು ಸಾಬೂನು ಮತ್ತು ನೀರಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಸ್ಯಾನಿಟೈಜರ್ ಬಳಸಬೇಕು. ಇತರರ ದೇಹದ ದ್ರವ ಸಂಪರ್ಕವಾಗುವುದಕ್ಕೆ ಬಿಡಬಾರದು ಎಂದು ಅವರು ದೇಶವಾಸಿಗಳಿಗೆ ಸಲಹೆ ಮಾಡಿದ್ದಾರೆ ಎನ್ನಲಾಗಿದೆ.