ದುಬೈ, ಅ 05 (DaijiworldNews/MS): ದುಬೈನಲ್ಲಿ ಜೆಬೆಲ್ ಅಲಿ ಪ್ರದೇಶದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಹಿಂದೂ ದೇವಾಲಯವನ್ನು ಯುಎಇಯ ಸಹಿಷ್ಣುತೆ ಸಚಿವ ಎಚ್.ಎಚ್.ಶೇಖ್ ನಹ್ಯಾನ್ ಬಿನ್ ಮುಬಾರಕ್ ಅಲ್ ನಹ್ಯಾನ್ ಲೋಕಾರ್ಪಣೆಗೊಳಿಸಿದ್ದಾರೆ. ಈ ಮೂಲಕ ಹಿಂದೂ ದೇವಾಲಯದ ದಶಕದ ಭಾರತೀಯ ಕನಸು ಮಂಗಳವಾರ ನನಸಾಗಿದೆ.
ಈ ದೇವಸ್ಥಾನ ನಿರ್ಮಾಣಕ್ಕೆ ಫೆಬ್ರವರಿ 2020 ರಲ್ಲಿ ದೇವಾಲಯದ ಅಡಿಪಾಯವನ್ನು ಹಾಕಲಾಯಿತು. ದಸರಾ ಹಬ್ಬದ ದಿನವಾದ ಇಂದಿನಿಂದ ಅಧಿಕೃತವಾಗಿ ಸಾರ್ವಜನಿಕರಿಗೆ ತೆರೆದಿರುವ ಈ ದೇವಾಲಯವು ಎಲ್ಲಾ ಧರ್ಮಗಳ ಜನರನ್ನು ಸ್ವಾಗತಿಸುತ್ತದೆ ಮತ್ತು 16 ದೇವತೆಗಳ ಇತರ ಒಳಾಂಗಣ ಕೆಲಸಗಳನ್ನು ವೀಕ್ಷಿಸಲು ಭಕ್ತರು ಮತ್ತು ಇತರ ಸಂದರ್ಶಕರಿಗೆ ಪ್ರವೇಶವನ್ನು ಅನುಮತಿಸಿದೆ .
ದೇವಾಲಯದ ಆಡಳಿತ ಮಂಡಳಿಯು ತನ್ನ ವೆಬ್ಸೈಟ್ ಮೂಲಕ ಕ್ಯೂಆರ್-ಕೋಡ್-ಆಧಾರಿತ ಅಪಾಯಿಂಟ್ಮೆಂಟ್ ಬುಕಿಂಗ್ ವ್ಯವಸ್ಥೆ ಜಾರಿಗೊಳಿಸಿದೆ. ದೇವಾಲಯವು ಮೊದಲ ದಿನದಿಂದ, ವಿಶೇಷವಾಗಿ ವಾರಾಂತ್ಯಗಳಲ್ಲಿ ಸಾವಿರಾರು ಮಂದಿ ಭೇಟಿ ನೀಡಿದ್ದಾರೆ. ಜನಸಂದಣಿ ನಿರ್ವಹಣೆಗೆ ಮತ್ತು ಸಾಮಾಜಿಕ ಅಂತರವನ್ನು ಖಚಿತಪಡಿಸಿಕೊಳ್ಳಲು ಕ್ಯೂಆರ್-ಕೋಡೆಡ್ ಅಪಾಯಿಂಟ್ಮೆಂಟ್ ವ್ಯವಸ್ಥೆ ಕಲ್ಪಿಸಲಾಗಿದೆ.