ಕ್ಯಾಲಿಫೋರ್ನಿಯಾ, ಅ 05 (DaijiworldNews/MS): ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ 8 ತಿಂಗಳ ಹೆಣ್ಣು ಮಗು ಸೇರಿ ಭಾರತ ಮೂಲದ ನಾಲ್ವರ ಅಪಹರಣ ಮಾಡಿರುವ ಪ್ರಕರಣ ಸಂಬಂಧ 48 ವರ್ಷದ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.
ಶಂಕಿತನನ್ನು ಜೀಸಸ್ ಮ್ಯಾನ್ಯುಯೆಲ್ ಸಲ್ಗಾಡೊ ಎಂದು ಗುರುತಿಸಲಾಗಿದೆ. ಈತ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಅವರು ತಿಳಿಸಿದ್ದಾರೆ.
ಪಂಜಾಬ್ನ ಹೋಶಿಯಾರ್ಪುರದ ಹಾರ್ಸಿ ಪಿಂಡ್ ಮೂಲದ ಸಿಖ್ ಕುಟುಂಬವನ್ನು ಸೋಮವಾರ ಕ್ಯಾಲಿಫೋರ್ನಿಯಾ ಮೆರ್ಸೆಡ್ ಕೌಟಿಯಲ್ಲಿ ಅಪಹರಿಸಲಾಗಿತ್ತು. 8 ತಿಂಗಳ ಮಗು ಆರೋಹಿ ಧೇರಿ, ಜಸ್ಲೀನ್ ಕೌರ್ (27), ಜಸ್ದೀಪ್ ಸಿಂಗ್ (36) ಮತ್ತು ಅಮನ್ದೀಪ್ ಸಿಂಗ್ (39) ಅಪಹರಣಕ್ಕೆ ಒಳಗಾದವರು ಎಂದು ಗುರುತಿಸಲಾಗಿದೆ.
ಇದೇ ವೇಳೆ, ನಾಪತ್ತೆಯಾದವರ ಸುಳಿವು ಇನ್ನೂ ಲಭ್ಯವಾಗಿಲ್ಲ. ಮಂಗಳವಾರ ಸಂತ್ರಸ್ತರೊಬ್ಬರ ಬ್ಯಾಂಕ್ ಎಟಿಎಂ ಕಾರ್ಡ್ ಬಳಕೆ ಮಾಡಿರುವುದು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಅಪಹರಣ ವಿಷಯ ಅವರ ಸಂಬಂಧಿಕರನ್ನು ಆಘಾತಕ್ಕೆ ಒಳಪಡಿಸಿದೆ. ವಿಷಯ ತಿಳಿದು ಜಸ್ದೀಪ್ ಪೋಷಕರು ಆಘಾತಕ್ಕೆ ಒಳಗಾಗಿದ್ದಾರೆ ಎಂದು ನೆರೆಹೊರೆಯವರಾದ ಚರಣ್ಜಿತ್ ಸಿಂಗ್ ಹೇಳಿದ್ದಾರೆ.
ತನಿಖಾಧಿಕಾರಿಗಳು ಬ್ಯಾಂಕ್ ಎಟಿಎಂ ಕಾರ್ಡ್ ಬಳಕೆ ನಡೆಸಿದ ಸಂದರ್ಭದ ಸಿಸಿ ಕ್ಯಾಮಾರಾದ ಫೋಟೋವನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲಿ ವ್ಯಕ್ತಿಯು ಮೂಲ ಅಪಹರಣದ ದೃಶ್ಯದ ಸಿಸಿಟಿವಿಯ ಫೋಟೋವನ್ನು ಹೋಲುತ್ತಾನೆ" ಎಂದು ಮರ್ಸೆಡ್ ಕೌಂಟಿ ಶೆರಿಫ್ ಕಚೇರಿ ಹೇಳಿಕೆ ತಿಳಿಸಿದೆ.