ಎಂಟು ತಿಂಗಳ ಮಗು ಸಹಿತ ಭಾರತೀಯ ಮೂಲದ ನಾಲ್ವರ ನಿರ್ದಯ ಹತ್ಯೆ
Thu, Oct 06 2022 11:44:41 AM
ಕ್ಯಾಲಿಫೋರ್ನಿಯಾ,ಅ 06(DaijiworldNews/MS): ಕಳೆದ ವಾರ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಅಪಹರಣಕ್ಕೀಡಾಗಿದ್ದ, ಎಂಟು ತಿಂಗಳ ಹೆಣ್ಣು ಮಗು ಸೇರಿದಂತೆ ಭಾರತೀಯ ಮೂಲದ ನಾಲ್ವರು ಕುಟುಂಬದ ಸದಸ್ಯರನ್ನು ನಿರ್ದಯವಾಗಿ ಕೊಲೆ ಮಾಡಿದ್ದು, ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತೀಯ ಮೂಲದ ಎಂಟು ತಿಂಗಳ ಮಗು ಆರೂಹಿ ಧೇರಿ ಮತ್ತು ಆಕೆಯ ಪೋಷಕರಾದ 27 ವರ್ಷದ ಜಸ್ಲೀನ್ ಕೌರ್ ಮತ್ತು 36 ವರ್ಷದ ಜಸ್ದೀಪ್ ಸಿಂಗ್ ಮತ್ತು ಸಂಬಂಧಿ 39 ವರ್ಷದ ಅಮನದೀಪ್ ಸಿಂಗ್ ಅವರನ್ನು ಉತ್ತರ ಕ್ಯಾಲಿಫೋರ್ನಿಯಾದ ಮರ್ಸಿಡ್ ಕೌಂಟಿಯಲ್ಲಿರುವ ಅವರ ಮನೆಯಿಂದ ಅಪಹರಿಸಲಾಗಿತ್ತು.
ಕ್ಯಾಲಿಫೋರ್ನಿಯಾದ ಹಣ್ಣಿನ ತೋಟದಲ್ಲಿ ನಾಲ್ವರ ಮೃತದೇಹವು ಬುಧವಾರ ಸಂಜೆ ಪತ್ತೆಯಾಗಿದ್ದು ತೋಟದಲ್ಲಿ ಕೆಲಸ ಮಾಡುವ ರೈತ ಕಾರ್ಮಿಕರು ಮೊದಲು ಶವಗಳನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. "ಅಪಹರಣಕಾರ ಎಂಟು ತಿಂಗಳ ಮಗುವನ್ನೂ ನಿರ್ದಯವಾಗಿ ಕೊಲೆ ಮಾಡಿದ್ದು, ನಾವು ಉಮ್ಮಳಿಸಿ ಬರುತ್ತಿರುವ ದು:ಖ ಮತ್ತು ಕೋಪವನ್ನು ನಿಯಂತ್ರಿಸಿಕೊಂಡು ಈ ಮಾಹಿತಿಯನ್ನು ನೀಡುತ್ತಿದ್ದೇವೆ" ಎಂದು ಮರ್ಸಿಡ್ ಕೌಂಟಿ ಶೆರಿಫ್ ವೆರ್ನ್ ವಾರ್ನ್ಕೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಕುಟುಂಬವನ್ನು ಅಪಹರಿಸಿದ ಒಂದು ದಿನದ ನಂತರ, ಪೊಲೀಸರು ಶಂಕಿತ ಅಪಹರಣಕಾರನಾದ 48 ವರ್ಷದ ಜೀಸಸ್ ಮ್ಯಾನುಯೆಲ್ ಸಲ್ಗಾಡೊ ಎಂಬಾತನನ್ನು ಬಂಧಿಸಿದ್ದರು. ಬಂಧನಕ್ಕೊಳಗಾಗುವ ಭೀತಿಯಿಂದ ಸಲ್ಗಾಡೊ ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ಸದ್ಯ ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಪಹರಣಕಾರ ಸಲ್ಗಾಡೊ ನ ಕುಟುಂಬವು ಪೊಲೀಸರನ್ನು ಸಂಪರ್ಕಿಸಿ ಆತನೇ ಭಾರತೀಯ ಮೂಲದ ಕುಟುಂಬವನ್ನು ಕಿಡ್ನಾಪ್ ಮಾಡಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದಲ್ಲದೆ ಪೊಲೀಸರು ಬಿಡುಗಡೆ ಮಾಡಿದ ವಿಡಿಯೋದಲ್ಲಿ, ಮೃತ ಜಸ್ದೀಪ್ ಸಿಂಗ್ ಮತ್ತು ಅಮನದೀಪ್ ಸಿಂಗ್ ಅವರ ಕೈಗಳ್ಳನ್ನು ಕಟ್ಟಿ ಕಿಡ್ಮಾಪ್ ಮಾಡುವ ದೃಶ್ಯಗಳು ಸೆರೆಯಾಗಿದ್ದವು. ಕೆಲವು ಸೆಕೆಂಡುಗಳ ನಂತರ ಮಗುವನ್ನು ಎದೆಗವುಚಿಕೊಂಡು ತಾಯಿಯೂ ಕೂಡ ಕಟ್ಟಡದಿಂದ ಅಪಹರಣಕಾರನೊಂದಿಗೆ ಹೊರಬರುವುದನ್ನು ಈ ದೃಶ್ಯದಲ್ಲಿ ಕಾಣಬಹುದಾಗಿತ್ತು. ಕುಟುಂಬದ ಎಲ್ಲಾ ನಾಲ್ಕು ಸದಸ್ಯರನ್ನು ಒಂದು ಟ್ರಕ್ನಲ್ಲಿ ಕರೆದೊಯ್ಯಲಾಗಿತ್ತು
ಜಸ್ದೀಪ್ ಅವರ ಪೋಷಕರಾದ ಡಾ. ರಣಧೀರ್ ಸಿಂಗ್ ಮತ್ತು ಕಿರ್ಪಾಲ್ ಕೌರ್ ಹೋಶಿಯಾರ್ಪುರದ ಹರ್ಸಿ ಪಿಂಡ್ ಗ್ರಾಮದವರಾಗಿದ್ದಾರೆ.