ನವದೆಹಲಿ, ಅ 07 (DaijiworldNews/DB): ಬೆಲಾರಸ್ನ ಮಾನವ ಹಕ್ಕುಗಳ ವಕೀಲ ಅಲೆಸ್ ಬಿಯಾಲಿಯಾಟ್ಸ್ಕಿ, ರಷ್ಯಾದ ಮಾನವ ಹಕ್ಕುಗಳ ಸಂಸ್ಥೆ ಸ್ಮಾರಕ ಮತ್ತು ಉಕ್ರೇನ್ ಮಾನವ ಹಕ್ಕುಗಳ ಸಂಸ್ಥೆ ಸೆಂಟರ್ ಫಾರ್ ಸಿವಿಲ್ ಲಿಬರ್ಟೀಸ್ಗೆ 2022ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಅಕ್ಟೋಬರ್ 7ರ ಶುಕ್ರವಾರ ನಾರ್ವೆಯ ಓಸ್ಲೋದಲ್ಲಿ ನಾರ್ವೆಯ ನೊಬೆಲ್ ಸಮಿತಿಯ ಅಧ್ಯಕ್ಷ ಬೆರಿಟ್ ರೀಸ್-ಆಂಡರ್ಸನ್ ಅವರು ಪ್ರಶಸ್ತಿಯನ್ನು ಘೋಷಣೆ ಮಾಡಿದರು. ಶಾಂತಿಯನ್ನು ಉತ್ತೇಜಿಸಲು ವ್ಯಕ್ತಿ, ವ್ಯಕ್ತಿಗಳು ಅಥವಾ ಸಂಸ್ಥೆ ಕೈಗೊಂಡ ಉತ್ತಮ ಕ್ರಮಗಳನ್ನು ಗುರುತಿಸಿ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಯನ್ನು ನೀಡಲಾಗುತ್ತದೆ. ನಾರ್ವೆಯ ಸಂಸತ್ತು ಆಯ್ಕೆ ಮಾಡಿದ ಸಮಿತಿಯು ಪ್ರಶಸ್ತಿಗೆ ಆಯ್ಕೆ ಮಾಡುತ್ತದೆ.
ಆಲ್ಫ್ರೆಡ್ ನೊಬೆಲ್ ಅವರ ಉಯಿಲಿನ ಪ್ರಕಾರ ರಾಷ್ಟ್ರಗಳ ನಡುವೆ ಉತ್ತಮ ಸಹೋದರತ್ವ ಮೂಡಿಸುವುದು, ಶಾಂತಿ ಸಮಾವೇಶ ನಡೆಸಿ, ಶಾಂತಿಯುತ ವಾತಾವರಣವನ್ನು ಕಲ್ಪಿಸುವವರು ಈ ಪ್ರಶಸ್ತಿಗೆ ಅರ್ಹರಾಗಿರುತ್ತಾರೆ.
ವೈದ್ಯಕೀಯ, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿ 2022ನೇ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಈಗಾಗಲೇ ಘೋಷಣೆ ಮಾಡಲಾಗಿದೆ ಎಂದು ವರದಿಯಾಗಿದೆ.