ನ್ಯೂಯಾರ್ಕ್, ಅ 07 (DaijiworldNews/DB): ಅಮೆರಿಕಾದ ಮರ್ಸಿಡ್ ನಗರದಲ್ಲಿ ಪಂಜಾಬ್ ಮೂಲದ ಒಂದೇ ಕುಟುಂಬದ ನಾಲ್ವರು ಅಪಹರಣಕ್ಕೊಳಗಾಗಿ ಹತ್ಯೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿರುವ ಶಂಕಿತ ಆರೋಪಿ ಈ ಹಿಂದೆ ಅದೇ ಕುಟುಂಬದೊಂದಿಗೆ ಕೆಲಸ ಮಾಡಿದ್ದ ಎನ್ನಲಾಗಿದೆ.
ಎಂಟು ತಿಂಗಳ ಮಗು ಸೇರಿದಂತೆ ಪಂಜಾಬ್ ಮೂಲದ ಒಂದೇ ಕುಟುಂಬದ ನಾಲ್ವರನ್ನು ಅಪಹರಿಸಿ ಹತ್ಯೆಗೈದ ಶಂಕಿತ ಆರೋಪಿ ಜೀಸಸ್ ಮ್ಯಾನುವಲ್ ಸಲ್ಗಾಡೊನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು, ಮರ್ಸಿಡ್ ಕೌನ್ಸಿಲ್ ಜೈಲಿನಲ್ಲಿದ್ದಾನೆ. ಕೊಲೆಯಾದ ಜಸ್ಪ್ರೀತ್ ಅವರ ಟ್ರಕ್ಕಿಂಗ್ ಕಂಪೆನಿ ನಡೆಸುತ್ತಿದ್ದು, ಅದೇ ಕಂಪೆನಿಯಲ್ಲಿ ಈ ಹಿಂದೆ ಆರೋಪಿ ಕೆಲಸಕ್ಕಿದ್ದ. ಕೊಲೆಯಾದ ಕುಟುಂಬಕ್ಕೂ, ಈತನಿಗೂ ಹಳೆಯ ದ್ವೇಷವಿತ್ತು ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದು, ಕೃತ್ಯದಲ್ಲಿ ಭಾಗಿಯಾದ ಇತರರಿಗಾಗಿ ಮಾಹಿತಿ ಕಲೆ ಹಾಕಲಾಗುತ್ತಿದೆ.
ಎಂಟು ತಿಂಗಳ ಮಗು ಅರೂಹಿ ಧೇರಿ, ಆಕೆಯ ಪೋಷಕರು ಮತ್ತು ಚಿಕ್ಕಪ್ಪನನ್ನು ಸೋಮವಾರ ಅಪಹರಣ ಮಾಡಿ ಬಳಿಕ ಹತ್ಯೆ ಮಾಡಲಾಗಿತ್ತು. ಅಪಹರಣವಾದ ಒಂದೇ ಗಂಟೆಯೊಳಗೆ ಎಲ್ಲರನ್ನೂ ಹತ್ಯೆ ಮಾಡಲಾಗಿದೆ. ಬಂಧಿತ ಆರೋಪಿಯು 2005ರಲ್ಲಿ ಕಳ್ಳತನದ ಆರೋಪದಡಿ ಜೈಲು ಸೇರಿದ್ದ. ಹತ್ತು ವರ್ಷಗಳ ಬಳಿಕ ಜೈಲಿನಿಂದ ಬಿಡುಗಡೆಗೊಂಡು ಹೊರ ಬಂದಿದ್ದ ಎಂದು ತಿಳಿದು ಬಂದಿದೆ.