ಮಾಸ್ಕೋ, ಅ 08 (DaijiworldNews/DB): ಪ್ರಸ್ತುತ ರಷ್ಯಾ ವಶದಲ್ಲಿರುವ ಉಕ್ರೇನ್ನ ಕ್ರೈಮಿಯನ್ ಪೆನಿನ್ಸುಲಾದೊಂದಿಗೆ ಮುಖ್ಯ ಭೂಭಾಗವನ್ನು ಸಂಪರ್ಕಿಸುವ ಬೃಹತ್ ಸೇತುವೆಯಲ್ಲಿ ಶನಿವಾರ ಬೆಳಗ್ಗೆ ಭಾರೀ ಸ್ಪೋಟ ಕಾಣಿಸಿಕೊಂಡಿದೆ. ಸೇತುವೆಯ ಮಧ್ಯಭಾಗದಲ್ಲಿ ಸ್ಪೋಟದಿಂದಾಗಿ ಬೆಂಕಿ ತಗುಲಿಕೊಂಡಿದೆ.
ಕ್ಷಿಪಣಿ ದಾಳಿಯ ಪರಿಣಾಮವಾಗಿ ಸ್ಫೋಟ ಸಂಭವಿಸಿದೆ ಎಂದು ಖಾರ್ಕಿವ್ ಮೇಯರ್ ಇಹೋರ್ ತೆರೆಖೋವ್ ಹೇಳಿರುವುದಾಗಿ ವರದಿಯಾಗಿದೆ. ಸ್ಪೋಟದ ತೀವ್ರತೆಯನ್ನು ತೋರಿಸುವ ವೀಡಿಯೋ, ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ. ಭಾರೀ ಪ್ರಮಾಣದ ಹಾನಿ ಉಂಟಾಗಿದೆ. ಆದರೆ ಯಾವುದೇ ಸಾವು-ನೋವುಗಳ ಕುರಿತು ವರದಿಯಾಗಿಲ್ಲ.
ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಉಕ್ರೇನ್ ರಕ್ಷಣಾ ಇಲಾಖೆ, ಕ್ರೂಸರ್ ಮೊಸ್ಕ್ವಾ ಮತ್ತು ಕೆರ್ಚ್ ಸೇತುವೆ, ಉಕ್ರೇನಿಯನ್ ಕ್ರೈಮಿಯಾದಲ್ಲಿ ರಷ್ಯಾದ ಶಕ್ತಿಯ ಎರಡು ಕುಖ್ಯಾತ ಸಂಕೇತಗಳನ್ನು ನೆಲಸಮ ಮಾಡಲಾಗಿದೆ. ಇನ್ನು ಮುಂದೆ ರಷ್ಯಾ ಏನು ಮಾಡಲಿದೆ ಎಂದು ಪ್ರಶ್ನಿಸಿದೆ.