ನೈಜೀರಿಯಾ, ಅ 10 (DaijiworldNews/DB): ನೈಜೀರಿಯಾದ ಅನಂಬ್ರಾ ರಾಜ್ಯದಲ್ಲಿರುವ ನೈಜರ್ ನದಿಯಲ್ಲಿ ದೋಣಿ ಮುಳುಗಿ 76 ಮಂದಿ ಜಲಸಮಾಧಿಯಾದ ಘಟನೆ ಭಾನುವಾರ ನಡೆದಿದೆ. ಹಲವರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಒಗ್ಗಾರು ಪ್ರದೇಶದಲ್ಲಿ ಭೀಕರ ಪ್ರವಾಹ ತಲೆದೋರಿದ್ದ ಹಿನ್ನೆಲೆಯಲ್ಲಿ ಜನರನ್ನು ದೋಣಿಯ ಮುಖಾಂತರ ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ಯಲಾಗುತ್ತಿತ್ತು. ದೋಣಿಯು 85 ಜನರನ್ನು ಹೊತ್ತು ಸಾಗುತ್ತಿದ್ದ ವೇಳೆ ಅಲೆಗಳ ಹೊಡೆತಕ್ಕೆ ಸಿಕ್ಕಿ ಪಲ್ಟಿಯಾಗಿ ದುರಂತ ಸಂಭವಿಸಿದೆ. ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ಹೊತ್ತು ದೋಣಿ ಸಾಗುತ್ತಿದ್ದುದರಿಂದ ಭಾರ ತಾಳಲಾರದೆ ದೋಣಿ ಮಗುಚಿ ಬಿದ್ದಿದೆ ಎಂದೂ ಹೇಳಲಾಗುತ್ತಿದೆ.
ಇನ್ನು ದುರಂತದ ಬಗ್ಗೆ ನೈಜೀರಿಯಾ ಅಧ್ಯಕ್ಷ ಮುಹಮ್ಮದ್ ಬುಹಾರಿ ವಿಷಾದ ವ್ಯಕ್ತಪಡಿಸಿದ್ದಾರೆ. ದೋಣಿ ದುರಂತದಲ್ಲಿ ಮಡಿದವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ಕರುಣಿಸಲಿ. ಕುಟುಂಬಿಕರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುವೆ. ನಾಪತ್ತೆಯಾದವರ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದ್ದು, ಅವರೆಲ್ಲರೂ ಕ್ಷೇಮವಾಗಿ ಬರಲಿ ಎಂದು ಟ್ವೀಟ್ ಮಾಡಿದ್ದಾರೆ.