ವಾಷಿಂಗ್ಟನ್/ ಇಸ್ಲಾಮಾಬಾದ್, ಅ 14 (DaijiworldNews/DB): ಸಭೆಯೊಂದರಲ್ಲಿ ಪಾಲ್ಗೊಳ್ಳಲು ವಾಷಿಂಗ್ಟನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಪಾಕ್ ಹಣಕಾಸು ಸಚಿವ ಇಶಾಕ್ ದರ್ ಅವರನ್ನು ಅಲ್ಲಿದ್ದ ಅಪರಿಚಿತರು ಕಳ್ಳ, ಕಳ್ಳ, ಸುಳ್ಳುಗಾರ ಎಂದು ಕೂಗಿ ಮುಜುಗರ ತರಿಸಿದ ಘಟನೆ ನಡೆದಿದೆ.
ವಿಶ್ವಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ವಾರ್ಷಿಕ ಸಭೆಗಳಲ್ಲಿ ಪಾಲ್ಗೊಳ್ಳಲು ಇಶಾಕ್ ಅವರು ವಾಷಿಂಗ್ಟನ್ಗೆ ಬಂದಿಳಿದಿದ್ದರು. ಈ ವೇಳೆ ದಲ್ಲಾಸ್ ವಿಮಾನ ನಿಲ್ದಾಣದಲ್ಲಿದ್ದ ಕೆಲವು ಅಪರಿಚಿತರು ದರ್ ಕಡೆಗೆ ಕೈ ತೋರಿಸಿ ಕಳ್ಳ, ಕಳ್ಳ, ಸುಳ್ಳುಗಾರ ಎಂದು ಕೂಗಿದ್ದಾರೆ. ಇದರಿಂದ ತೀವ್ರ ಮುಜುಗರಕ್ಕೊಳಗಾದ ದರ್ ಅವರೂ ಕೂಡಾ ನೀನು ಕಳ್ಳ, ಸುಳ್ಳುಗಾರ ಎಂದು ಘೋಷಣೆ ಕೂಗಿದವರತ್ತ ನೋಡಿ ಹೇಳಿದ ಘಟನೆ ನಡೆಯಿತು.
ಪಾಕಿಸ್ತಾನದ ಸಚಿವರುಗಳು ವಿದೇಶಿ ಪ್ರವಾಸದ ವೇಳೆ ಹಾಸ್ಯಕ್ಕೊಳಗಾಗುವುದು ಇದೇ ಮೊದಲಲ್ಲ. ಕಳೆದ ತಿಂಗಳು ಪಾಕಿಸ್ತಾನದ ಮಾಹಿತಿ ಸಚಿವೆ ಮರಿಯುಂ ಔರಂಗಜೇಬ್ ಅವರು ಲಂಡನ್ನ ಕಾಫಿ ಶಾಪ್ವೊಂದರಲ್ಲಿಇದೇ ರೀತಿಯ ಮುಖಭಂಗ ಅನುಭವಿಸಿದ್ದರು.