ಇಂಗ್ಲೆಂಡ್, ಅ 17 (DaijiworldNews/DB): ಅಧಿಕಾರಕ್ಕೇರಿದ ಕೇವಲ 40 ದಿನಗಳಲ್ಲಿ ಬ್ರಿಟನ್ ಪ್ರಧಾನಿ ಲಿಜ್ ಟ್ರಸ್ ಅವರಿಗೆ ಬಂಡಾಯದ ಬಿಸಿ ತಟ್ಟಿದೆ. ಆರ್ಥಿಕ ಯೋಜನೆಯೊಂದನ್ನು ಘೋಷಣೆ ಮಾಡಿ ಇದೀಗ ಯು ಟರ್ನ್ ತೆಗೆದುಕೊಂಡಿರುವುದೇ ಅವರ ವಿರುದ್ದ ಆಕ್ರೋಶಗಳು ವ್ಯಕ್ತವಾಗಲು ಕಾರಣವಾಗಿದೆ.
ಪ್ರಧಾನಿ ಅಭ್ಯರ್ಥಿಯಾಗಿದ್ದ ಭಾರತೀಯ ಮೂಲದ ರಿಷಿ ಸುನಕ್ ಅವರ ವಿರುದ್ದ ಗೆಲುವು ಸಾಧಿಸಿ ಆರು ವಾರಗಳ ಹಿಂದಷ್ಟೇ ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಲಿಜ್ ಟ್ರಸ್ ಅವರ ಪ್ರಮುಖ ಆರ್ಥಿಕ ಯೋಜನೆಗಳ ಪೈಕಿ ಯೋಜಿತ ತೆರಿಗೆ ಕಡಿತದ ವಿಷಯದಲ್ಲಿ ಇದೀಗ ಅವರ ಸರ್ಕಾರ ಯು ಟರ್ನ್ ತೆಗೆದುಕೊಂಡಿದ್ದಾರೆ. ಇದಕ್ಕೆ ಅವರ ವಿರುದ್ದ ಆಕ್ರೋಶ ವ್ಯಕ್ತವಾಗಿದ್ದು, ತೀವ್ರ ಮುಖಭಂಗಕ್ಕೊಳಗಾಗಿದ್ದಾರೆ. ಹಣದುಬ್ಬರ ಪೀಡಿತ ಮಾರುಕಟ್ಟೆಗಳನ್ನು ಸುಗಮ ದಾರಿಗ ತರಲು ಮತ್ತು ಸಂಸದರ ಸಮಸ್ಯೆಗಳನ್ನು ನಿವಾರಿಸಲು ವಿಫಲರಾಗಿದ್ದಾರೆಂದು ಸಂಸದರು ಲಿಜ್ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.
ಈ ನಡುವೆ ಲಿಜ್ ಟ್ರಸ್ ಕ್ರಿಸ್ಮಸ್ವರೆಗಾದರೂ ಪ್ರಧಾನಿಯಾಗಿ ಉಳಿಯುತ್ತಾರಾ ಎಂಬುದಾಗಿ ಬ್ರಿಟನ್ ಜನರಲ್ಲಿ ಪ್ರಶ್ನೆಗಳೆದ್ದಿವೆ. ಇವೆಲ್ಲದರ ನಡುವೆ ರಿಷಿ ಸುನಕ್ ಪ್ರಧಾನಿಯಾಗಿ ಆಯ್ಕೆಯಾಗುತ್ತಾರೆಯೇ ಎಂಬ ಗುಸುಗುಸುಗಳು ಕೂಡಾ ಹಬ್ಬುತ್ತಿವೆ ಎಂದು ತಿಳಿದು ಬಂದಿದೆ.