ಉಕ್ರೇನ್, ಅ 18 (DaijiworldNews/DB): ಉಕ್ರೇನ್ ಗಡಿ ಸಮೀಪದಲ್ಲಿರುವ ನೈರುತ್ಯ ರಷ್ಯಾದ ಯೆಸ್ಕ್ನ ವಸತಿ ಪ್ರದೇಶದಲ್ಲಿ ರಷ್ಯಾದ ಸೇನಾ ವಿಮಾನ ಪತನಗೊಂಡು ಮೂವರು ಮಕ್ಕಳು ಸೇರಿ ಕನಿಷ್ಠ 13 ಮಂದಿ ಸಾವನ್ನಪ್ಪಿದ್ದಾರೆ.
ಸುಖೋಯ್ ಸು-34 ಪತನಕ್ಕೀಡಾದ ವಿಮಾನ. ಸೋಮವಾರವೇ ಘಟನೆ ಸಂಭವಿಸಿದ್ದು, ವಿಮಾನ ಪತನವಾದ ಮಾಹಿತಿ ತಿಳಿದ ತತ್ಕ್ಷಣ ಅವಶೇಷಗಳಡಿ ಸಿಲುಕಿರುವವರಿಗಾಗಿ ಹುಡುಕಾಟ ನಡೆಸಿದ್ದು, ಮೃತದೇಹಗಳನ್ನು ಹೊರ ತೆಗೆಯಲಾಗಿದೆ. 19 ಮಂದಿ ಘಟನೆಯಲ್ಲಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತುರ್ತು ಪರಿಸ್ಥಿತಿಗಳ ಸಚಿವಾಲಯ ಹೇಳಿರುವುದಾಗಿ ರಷ್ಯಾ ಮಾಧ್ಯಮಗಳು ವರದಿ ಮಾಡಿವೆ.
ವಿಮಾನ ಪತನವಾಗಿದ್ದರಿಂದ ಸುಮಾರು 600 ಮಂದಿ ವಾಸಿಸುತ್ತಿದ್ದ ಒಂಬತ್ತು ಅಂತಸ್ತಿನ ಕಟ್ಟಡಕ್ಕೆ ಬೆಂಕಿ ಹತ್ತಿಕೊಂಡಿದೆ. ಸೋವಿಯತ್ ಯುಗದ ವಸತಿ ಪ್ರದೇಶದ ಕಟ್ಟಡದ ಐದು ಮಹಡಿಗಳಲ್ಲಿ 2,000 ಚದರ ಮೀಟರ್ವರೆಗೂ ಬೆಂಕಿ ಆವರಿಸಿದೆ. 17 ಫ್ಲಾಟ್ಗಳಿಗೆ ಬೆಂಕಿಯಿಂದ ಹಾನಿಯುಂಟಾಗಿದೆ. ವಿಮಾನದ ಪೈಲಟ್ಗಳು ಅಪಾಯದಿಂದ ಪಾರಾಗಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿರುವುದಾಗಿ ವರದಿಯಾಗಿದೆ.
ಇನ್ನು ಘಟನೆ ಕುರಿತಂತೆ ಪ್ರತಿಕ್ರಿಯಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಘಟನೆಯಲ್ಲಿ ಗಾಯಾಳುಗಳಾದವರ ಚಿಕಿತ್ಸೆಗೆ ಎಲ್ಲಾ ರೀತಿಯ ನೆರವು ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ದಕ್ಷಿಣ ಮಿಲಿಟರಿ ಜಿಲ್ಲೆಯ ಮಿಲಿಟರಿ ಏರ್ಫೀಲ್ಡ್ನಿಂದ ತರಬೇತಿ ಹಾರಾಟದ ಸಲುವಾಗಿ ಈ ವಿಮಾನ ಟೇಕಾಫ್ ಆಗಿತ್ತು. ಈ ವೇಳೆ ವಿಮಾನದ ಒಂದು ಎಂಜಿನ್ಗೆ ಬೆಂಕಿ ಹತ್ತಿಕೊಂಡಿದ್ದು, ಇದರಿಂದಾಗಿ ವಿಮಾನ ಪತನವಾಗಿದೆ. ರಷ್ಯಾದ ತನಿಖಾ ಸಮಿತಿಯು ತನಿಖೆಯನ್ನು ಕೈಗೆತ್ತಿಕೊಂಡಿದೆ ಎಂದು ತಿಳಿದು ಬಂದಿದೆ.