ಲಂಡನ್, ಅ 21 (DaijiworldNews/DB): ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಲಿಜ್ ಟ್ರಸ್ ಅವರು ಗುರುವಾರ ರಾಜೀನಾಮೆ ನೀಡಿದ ಬೆನ್ನಲ್ಲೇ ಬೋರಿಸ್ ಜಾನ್ಸನ್ ಅವರು ಮತ್ತೆ ಪ್ರಧಾನಿ ಪಟ್ಟಕ್ಕೆ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಪ್ರಧಾನಿ ಪಟ್ಟಕ್ಕೇರಿ ಕೇವಲ 40 ದಿನಗಳಲ್ಲೇ ಲಿಜ್ ಟ್ರಸ್ ಅವರು ರಾಜೀನಾಮೆ ನೀಡಿ ಹೊರ ಬಂದಿದ್ದು, ಇದರಿಂದ ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಹೊಸ ನೇಮಕವಾಗಬೇಕಿದೆ. ಲಿಜ್ ಜೊತೆಗೆ ಸ್ಪರ್ಧಿಸಿದ್ದ ಭಾರತೀಯ ಮೂಲದ ರಿಷಿ ಸುನಕ್ ಅವರ ಹೆಸರೂ ಮತ್ತೊಮ್ಮೆ ಮುಂಚೂಣಿಯಲ್ಲಿದೆ. ಈ ನಡುವೆ ಇತ್ತೀಚೆಗಷ್ಟೇ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಕನ್ಸರ್ವೇಟಿವ್ ಪಕ್ಷದ ನಾಯಕತ್ವದಲ್ಲಿ ಮತ್ತೊಮ್ಮೆ ಪ್ರಧಾನಿ ಹುದ್ದೆಗೆ ಸ್ಪರ್ಧಿಸಲಿದ್ದಾರೆ ಎಂಬುದಾಗಿ ಮಾಧ್ಯಮವೊಂದು ವರದಿ ಮಾಡಿದೆ. ಸದ್ಯ ಜಾನ್ಸನ್ ಅವರು ಸ್ಪರ್ಧೆಗೆ ಆಕಾಂಕ್ಷಿಯಾಗಿದ್ದು, ಸಾಧಕ-ಬಾಧಕಗಳ ಕುರಿತು ಅವಲೋಕಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ರಿಷಿ ಸುನಕ್ ಅವರೂ ಕೂಡಾ ಬ್ರಿಟನ್ ಹಣಕಾಸು ಸಚಿವರಾಗಿ ಅನುಭವ ಹೊಂದಿದ್ದು, ಮತ್ತೊಮ್ಮೆ ಪ್ರಧಾನಿ ಹುದ್ದೆಗಾಗಿ ಪೈಪೋಟಿಗಿಳಿಯಲಿದ್ದಾರೆ ಎಂದು ತಿಳಿದು ಬಂದಿದೆ. ಈ ನಡುವೆ ರಕ್ಷಣಾ ಕಾರ್ಯದರ್ಶಿ ಬೆನ್ ವ್ಯಾಲೇಸ್, ಹೌಸ್ ಆಫ್ ಕಾಮನ್ಸ್ ನಾಯಕ ಪೆನ್ನಿ ಮೊರ್ಡಾಂಟ್ ಅವರ ಹೆಸರೂ ಮುಂಚೂಣಿಯಲ್ಲಿದೆ ಎನ್ನಲಾಗಿದೆ.