ಕಾಬೂಲ್, ಅ 22 (DaijiworldNews/DB): ಕಾಬೂಲ್ನ ಇಸ್ಲಾಮಿಕ್ ಸ್ಟೇಟ್ (ಐಎಸ್) ಅಡಗುತಾಣಕ್ಕೆ ನುಗ್ಗಿ ಆರು ಮಣದಿ ಭಯೋತ್ಪಾದಕರನ್ನು ತಾಲಿಬಾನ್ ಪಡೆಗಳು ಹತ್ಯೆ ಮಾಡಿವೆ.
ಇಸ್ಲಾಮಿಕ್ ಎಮಿರೇಟ್ನ ವಿಶೇಷ ಘಟಕಗಳ ಪಡೆಗಳು ಐಎಸ್ ಭಯೋತ್ಪಾದಕರ ಅಡಗುದಾಣವನ್ನು ಶುಕ್ರವಾರ ಪತ್ತೆ ಹಚ್ಚಿ ಆರು ಮಂದಿಯನ್ನು ಹತ್ಯೆಗೈದು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿವೆ ಎಂದು ಅಫ್ಘಾನ್ ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್ ಶನಿವಾರ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ಅಡಗುದಾಣಕ್ಕೆ ದಾಳಿ ಮಾಡಿದ ವೇಳೆ ಅಸಾಲ್ಟ್ ರೈಫಲ್, ಹ್ಯಾಂಡ್ ಗ್ರೆನೇಡ್, ಸ್ಫೋಟಕ ವಸ್ತುಗಳು ಮತ್ತು ಕಾರು ಸೇರಿದಂತೆ ಹಲವಾರು ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಅಲ್ಲಿರುವುದು ಪತ್ತೆಯಾಗಿತ್ತು. ಇವೆಲ್ಲವನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ. ಭಯೋತ್ಪಾದಕರ ವಿರುದ್ದದ ಈ ಕಾರ್ಯಾಚರಣೆಯಲ್ಲಿ ಭದ್ರತಾ ಸಿಬಂದಿಯೊಬ್ಬರು ಮೃತಪಟ್ಟಿದ್ದು, ಮತ್ತೊಬ್ಬ ಸಿಬಂದಿ ಗಾಯಗೊಂಡಿದ್ದಾರೆ ಎಂದವರು ಟ್ವೀಟ್ ಮಾಡಿದ್ದಾರೆ.
ಹತ್ಯೆಯಾದ ಭಯೋತ್ಪಾದಕರು ವಜೀರ್ ಅಕ್ಬರ್ ಖಾನ್ ನ ಮಸೀದಿ ಮತ್ತು ದಶ್ತ್-ಎ-ಬಾರ್ಚಿ ಜಿಲ್ಲೆಯ ಕಾಲೇಜೊಂದರ ಮೇಲೆ ನಡೆದ ದಾಳಿಯಲ್ಲಿ ಪಾತ್ರ ವಹಿಸಿದ್ದರು ಎನ್ನಲಾಗಿದೆ.