ಸೌದಿ ಅರೇಬಿಯಾ, ಅ 23 (DaijiworldNews/DB): ನವೆಂಬರ್ನಲ್ಲಿ ಸೌದಿ ಅರೇಬಿಯಾ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ನವೆಂಬರ್ 14ರಂದು ಬೆಳಗ್ಗೆ ಅವರು ಭಾರತಕ್ಕೆ ಆಗಮಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಅವರು ಭಾರತ ಭೇಟಿ ಹಮ್ಮಿಕೊಳ್ಳಲಿದ್ದಾರೆ. ಈ ಸಂಬಂಧ ವಿದೇಶಾಂಗ ಸಚಿವರ ಮೂಲಕ ಸೆಪ್ಟಂಬರ್ನಲ್ಲೇ ಸೌದಿ ಯುವರಾಜನಿಗೆ ಪತ್ರ ಕಳುಹಿಸಲಾಗಿತ್ತು. ಹೀಗಾಗಿ ಅವರು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯುವ ಜಿ 20 ಶೃಂಗಸಭೆಗೆ ತೆರಳಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಸೌದಿ ಇಂಧನ ಸಚಿವ ಅಬ್ದುಲ್ ಅಜೀಜ್ ಬಿನ್ ಸಲ್ಮಾನ್ ಈ ವಾರ ಭಾರತಕ್ಕೆ ಭಾರತಕ್ಕೆ ಭೇಟಿ ನೀಡಿದ್ದು, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ತೈಲ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ವಿದ್ಯುತ್ ಸಚಿವ ಆರ್.ಕೆ. ಸಿಂಗ್ ಮತ್ತಿತರರೊಂದಿಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ್ದರು.
ಇನ್ನು ಅಲ್ಜೀರಿಯಾದಲ್ಲಿ ನವೆಂಬರ್ 1ರಂದು ನಡೆಯುವ ಅರಬ್ ಶೃಂಗಸಭೆಯಿಂದ ಸೌದಿ ಯುವರಾಜ ದೂರವುಳಿಯಲಿದ್ದಾರೆ. ವೈದ್ಯರ ಸಲಹೆ ಮೇರೆಗೆ ಅವರು ಇದರಲ್ಲಿ ಭಾಗಿಯಾಗುತ್ತಿಲ್ಲ ಎಂದು ಅಲ್ಜೀರಿಯಾದ ಪ್ರೆಸಿಡೆನ್ಸಿ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.