ದಿ ಹೇಗ್ , ಫೆ 18 (MSP): ಗೂಢಚಾರಿಕೆ ಆರೋಪದಲ್ಲಿ ಪಾಕಿಸ್ತಾನದಿಂದ ಬಂಧನಕ್ಕೊಳಗಾಗಿ ಸೇನಾ ನ್ಯಾಯಾಲಯ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತದ ನೌಕಾ ಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಪ್ರಕರಣ ಕುರಿತ ವಿಚಾರಣೆಯನ್ನು ಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ)ದಲ್ಲಿ ಸೋಮವಾರದಿಂದ ಆರಂಭವಾಗಲಿದೆ.
ಅಂತಾರಾಷ್ಟ್ರೀಯ ವ್ಯಾಜ್ಯಗಳ ಪರಿಹಾರಕ್ಕೆ ರಚನೆಯಾದ ಐಸಿಜೆಯಲ್ಲಿ ಫೆ.18 ರಂದು ಭಾರತದ ವಕೀಲ ಹರೀಶ್ ಸಾಳ್ವೆ ವಾದ ಮಂಡಿಸಲಿದ್ದಾರೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಸರ್ಕಾರದ ಪರ ವಕೀಲರಾದ ಖಾವರ್ ಖುರೇಷಿ ಫೆ. 19 ರಂದು ವಾದ ಮಂಡಿಸಲಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯನ್ನು ಸಾಳ್ವೆ ಅವರು 20 ರಂದು ನೀಡಲಿದ್ದಾರೆ. 21 ರಂದು ಪಾಕಿಸ್ತಾನ ಕೊನೆಯದಾಗಿ ವಾದಿಸಲಿದೆ. ಅಂದೇ ಕೋರ್ಟ್ ತನ್ನ ತೀರ್ಪನ್ನು ಪ್ರಕಟಿಸುವ ಅಥವಾ ಕಾಯ್ದಿರಿಸುವ ಸಾಧ್ಯತೆ ಇದೆ. ಕೋರ್ಟ್ ವಿಚಾರಣೆಯನ್ನು ಯುಎನ್ ವೆಬ್ ಟಿವಿಯಲ್ಲಿ ನೇರಪ್ರಸಾರ ಮಾಡಲಾಗುತ್ತದೆ ಇದು ವಿಶ್ವಸಂಸ್ಥೆಯ ಆನ್ ಲೈನ್ ಚಾನೆಲ್ ಆಗಿದೆ.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಪಾಕಿಸ್ತಾನದ ಉಗ್ರರು ದಾಳಿ ನಡೆಸಿದ ನಂತರ ಉಭಯ ದೇಶಗಳ ನಡುವೆ ಸಂಘರ್ಷದ ವಾತಾವರಣ ಇರುವಾಗಲೇ ನಾಲ್ಕು ದಿನಗಳ ಜಾಧವ್ ವಿಚಾರಣೆ ಆರಂಭವಾಗಲಿದೆ.
ಜಾಧವ್ ಅವರನ್ನು ಉಳಿಸಿಕೊಳ್ಳಲು ಎಲ್ಲಾ ಸಿದ್ಧತೆಯನ್ನು ಭಾರತ ಮಾಡಿಕೊಂಡಿದೆ ಎನ್ನಲಾಗುತ್ತಿದೆ. ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ಯಾವುದೇ ಮಾಹಿತಿಯನ್ನು ಬಹಿರಂಗ ಮಾಡಿಲ್ಲ.ಗೂಢಚಾರಿಕೆ ಆರೋಪದಲ್ಲಿ ಜಾಧವ್ ಅವರಿಗೆ 2017ರ ಏಪ್ರಿಲ್ ನಲ್ಲಿ ಮರಣದಂಡನೆಗೆ ಗುರಿಪಡಿಸಿತ್ತು. ಇದನು ಪ್ರಶ್ನಿಸಿ ಭಾರತ ಐಸಿಜೆ ಮೆಟ್ಟಿಲೇರಿತ್ತು. 2017ರ ಮೇ 18 ರಂದು ಐಸಿಜೆಯ 10 ಸದಸ್ಯರ ನ್ಯಾಯಪೀಠ ವಿಚಾರಣೆ ಅಂತ್ಯಗೊಳ್ಳವವರೆಗೂ ಜಾಧವ್ ಮರಣದಂದನೆಗೆ ತಡೆ ನೀಡಿತ್ತು.