ಲಂಡನ್, ಅ 25 (daijiworldNews/SM): ಬ್ರಿಟನ್ ದೇಶದ ಪ್ರಧಾನಿಯಾಗಿ ಭಾರತ ಮೂಲದ ರಿಷಿ ಸುನಕ್ ಆಯ್ಕೆಯಾಗಿದ್ದು, ಪ್ರಧಾನಿಯಾಗಿ ಔಪಚಾರಿಕವಾಗಿ ಪ್ರಮಾಣವಚನ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, 'ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಆಗಿರುವ ತಪ್ಪುಗಳನ್ನು ಸರಿಪಡಿಸಬೇಕಿದೆ ಎಂದರು. ರಿಷಿ ಸುನಕ್ ಅವರು ಬಕಿಂಗ್ಹ್ಯಾಮ್ ಅರಮನೆಯಲ್ಲಿ ಕಿಂಗ್ ಚಾರ್ಲ್ಸ್ ಅವರನ್ನು ಭೇಟಿಯಾದರು. ರಿಷಿ ಸುನಕ್ ಬ್ರಿಟನ್ ಮೊದಲ ಭಾರತೀಯ ಮೂಲದ ಪ್ರಧಾನಿಯಾಗಿದ್ದಾರೆ.
ಪ್ರಸ್ತುತ ದೇಶ ಗಂಭೀರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ. ಈ ಕಾರಣದಿಂದಾಗಿ ಈ ಕ್ಷಣದಿಂದಲೇ ಪ್ರಧಾನಿಯಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದಿದಿದ್ದಾರೆ.
'ಪ್ರಸ್ತುತ ನಮ್ಮ ದೇಶವು ಆಳವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಉಕ್ರೇನ್ನಲ್ಲಿನ ಪುಟಿನ್ ಯುದ್ಧವು ಪ್ರಪಂಚದಾದ್ಯಂತದ ಮಾರುಕಟ್ಟೆಗಳನ್ನು ಅಸ್ಥಿರಗೊಳಿಸಿದೆ. ಮಾಜಿ ಪ್ರಧಾನಿ ಲಿಜ್ ಟ್ರಸ್ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸುವ ಸಲುವಾಗಿ ಕೆಲ ಕಠಿಣ ನಿರ್ಣಯಗಳನ್ನು ಕೈಗೊಂಡರು. ನಾನು ಅವರನ್ನು ಮೆಚ್ಚುತ್ತೇನೆ. ಆದರೆ ಉದ್ದೇಶಪೂರ್ವಕವಲ್ಲದ ಕೆಲವು ತಪ್ಪುಗಳು ಆಗಿವೆ. ವಾಸ್ತವವಾಗಿ ಆ ತಪ್ಪುಗಳನ್ನು ಸರಿಪಡಿಸಬೇಕಿದೆ ಎಂದರು.