ಬೀಜಿಂಗ್, ಅ 29 (DaijiworldNews/DB): ಜನಸಂಖ್ಯೆ ನಿಯಂತ್ರಣಕ್ಕೆ ವಿಚಿತ್ರ ಸೂತ್ರಗಳನ್ನು ಅಳವಡಿಸಿಕೊಳ್ಳುತ್ತಿರುವ ಚೀನಾದಲ್ಲಿ ಈಗ ಹೊಸದೊಂದು ಸೂತ್ರ ಜಾರಿಗೆ ಬಂದಿದೆ. ಅಧಿಕಾರಿಗಳು ನವ ದಂಪತಿಗಳಿಗೆ ಕರೆ ಮಾಡಿ ಶಿಶು ಜನನ ಯಾವಾಗ ಎಂದು ಪ್ರಶ್ನಿಸುತ್ತಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬರು ಹಂಚಿಕೊಂಡಿದ್ದು, ಪೋಸ್ಟ್ ವೈರಲ್ ಆದ ನಂತರ ಆ ಪೋಸ್ಟ್ನ್ನು ಚೀನಾ ಆಡಳಿತ ತೆಗೆದು ಹಾಕಿದೆ. ಬಳಿಕ ಇನ್ನೂ ಅನೇಕ ದಂಪತಿ ತಮಗೆ ಕರೆ ಬಂದಿರುವ ವಿಚಾರವನ್ನು ಹೇಳಿಕೊಂಡಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಕಳೆದ ಆಗಸ್ಟ್ನಲ್ಲಿ ಮದುವೆಯಾಗಿರುವ ನನಗೆ ಅಲ್ಲಿಂದಲೇ ನಿರಂತರ ಕರೆ ಬರಲಾರಂಭಿಸಿದ್ದು ಮಗು ಯಾವಾಗ ಆಗುತ್ತದೆ ಎಂದು ಕೇಳುತ್ತಿದ್ದಾರೆ ಎಂದು ಮಹಿಳೆಯೊಬ್ಬರು ಬರೆದುಕೊಂಡಿದ್ದಾರೆ. ಚೀನಾದ ನಾನ್ಜಿಂಗ್ ಸಿಟಿಯ ಸ್ಥಳೀಯ ಆಡಳಿತದಿಂದ ಮಹಿಳೆಯೊಬ್ಬರಿಗೆ ಬಂದ ಕರೆಯಲ್ಲಿ ಅಧಿಕಾರಿಗಳು ಗರ್ಭಿಣಿಯಾಗಿದ್ದೀರಾ ಎಂದು ಪ್ರಶ್ನಿಸಿದ್ದು, ಇಲ್ಲವೆಂದಿದ್ದಕ್ಕೆ ಎಷ್ಟು ಕಾಲ ಬೇಕಾಗುತ್ತದೆ ಎಂಬೆಲ್ಲ ಪ್ರಶ್ನೆಗಳನ್ನು ಕೇಳಲಾಗಿದೆ. ಅಲ್ಲದೆ ಹೊಸದಾಗಿ ಮದುವೆಯಾದವರು ವರ್ಷದೊಳಗೆ ಗರ್ಭಿಣಿಯಾಗಬೇಕೆಂಬುದು ಸರ್ಕಾರದ ಬಯಕೆ ಎಂದಿದ್ದಾರೆ ಎಂದು ಸುದ್ದಿಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.
ಜನಸಂಖ್ಯೆ ಬೆಳವಣಿಗೆ ಮತ್ತು ಸುಧಾರಣೆಗೆ ನೀತಿ ರೂಪಿಸುವ ಸಂಬಂಧ ಈ ಹಿಂದೆ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಹೇಳಿದ್ದರು.