ಸಿಯೋಲ್ (ದಕ್ಷಿಣ ಕೊರಿಯಾ), ಅ 30 (DaijiworldNews/DB): ಹ್ಯಾಲೋವೀನ್ ಆಚರಣೆ ವೇಳೆ ಶನಿವಾರ ರಾತ್ರಿ ಉಂಟಾದ ಕಾಲ್ತುಳಿತದಿಂದಾಗಿ 19 ಮಂದಿ ವಿದೇಶಿಯರು ಸೇರಿದಂತೆ ಕನಿಷ್ಠ 151 ಮಂದಿ ಬಲಿಯಾದ ಘಟನೆ ದಕ್ಷಿಣ ಕೊರಿಯಾದ ಸಿಯೋಲ್ನಲ್ಲಿ ನಡೆದಿದೆ. ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಸಿಯೋಲ್ನ ಇಟಾವೊನ್ ಜಿಲ್ಲೆಯಲ್ಲಿ ಶನಿವಾರ ರಾತ್ರಿ ಹ್ಯಾವೀಲೋನ್ ಆಚರಣೆ ನಡೆಯುತ್ತಿದ್ದ ವೇಳೆ ಕಾಲ್ತುಳಿತ ಸಂಭವಿಸಿತ್ತು. ಇದರಿಂದ ಕನಿಷ್ಠ 151 ಮಂದಿ ಮೃತಪಟ್ಟಿದ್ದಾರೆ. ಮೃತರ ಪೈಕಿ 19 ಮಂದಿ ವಿದೇಶಿಯರೂ ಸೇರಿದ್ದಾರೆ. ಇನ್ನು ಸುಮಾರು 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ರಾಷ್ಟ್ರೀಯ ಶೋಕಾಚರಣೆ ಘೋಷಣೆ
ಘಟನೆ ಹಿನ್ನೆಲೆಯಲ್ಲಿ ತೀವ್ರ ಸಂತಾಪ ವ್ಯಕ್ತಪಡಿಸಿರುವ ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್, ಈ ಘಟನೆ ಭಯಾನಕವಾದುದು. ದುರಂತದ ಬಗ್ಗೆ ತಿಳಿದು ಭಾವುಕನಾಗಿದ್ದೇನೆ ಎಂದಿದ್ದಾರೆ. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ. ಮೃತರ ಅಂತ್ಯಕ್ರಿಯೆಗೆ ಸರ್ಕಾರ ಎಲ್ಲಾ ಸಹಾಯ ಮಾಡಲಿದೆ ಎಂದವರು ಅಧ್ಯಕ್ಷೀಯ ಕಚೇರಿಯಿಂದ ಮಾಡಿದ ಭಾಷಣದಲ್ಲಿ ತಿಳಿಸಿದ್ದಾರೆ. ಅಲ್ಲದೆ ಎಲ್ಲಾ ಸರ್ಕಾರಿ ಕಚೇರಿಗಳು ತಮ್ಮ ಧ್ವಜಗಳನ್ನು ಅರ್ಧಕ್ಕೆ ಇಳಿಸುವಂತೆ ಆದೇಶಿಸಿದ್ದಾರೆ. ಇನ್ನು ಇದೇ ವೇಳೆ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದ್ದಾರೆ.
ಕಂಬನಿ ಮಿಡಿದ ವಿಶ್ವ ನಾಯಕರು
ಇನ್ನು ಸಿಯೋಲ್ನಲ್ಲಿ ನಡೆದ ಕಾಲ್ತುಳಿತ ಘಟನೆ ಬಗ್ಗೆ ವಿಶ್ವ ನಾಯಕರು ಕಂಬನಿ ಮಿಡಿದಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಸಂತಾಪ ಸೂಚಿಸಿದ್ದಾರೆ. ಈ ಕಠಿಣ ಸಮಯದಲ್ಲಿ ಭಾರತ ದಕ್ಷಿಣ ಕೊರಿಯಾದೊಂದಿಗಿದೆ. ಅಲ್ಲಿಗೆ ಬೇಕಾದ ಎಲ್ಲಾ ಅಗತ್ಯ ನೆರವು ನೀಡುವುದಾಗಿ ಸಚಿವ ಜೈಶಂಕರ್ ಘೋಷಣೆ ಮಾಡಿದ್ದಾರೆ.