ಟೆಹರಾನ್, ಅ 31 (DaijiworldNews/MS): ಇರಾನ್ನಲ್ಲಿ ಹಿಜಾಬ್ ಪ್ರತಿಭಟನೆಯ ಕಾವು ಮುಂದುವರೆದಿದೆ. ಇದೇ ಹೋರಾಟದಲ್ಲಿ 20 ಹರೆಯದ ಸೆಲೆಬ್ರಿಟಿ ಚೆಫ್ ಮೆಹರ್ಷಾದ್ ಶಾಹಿದಿ ಅಲಿಯಾಸ್ 'ಜೇಮಿ ಆಲಿವರ್' ಅ 26 ರ ಬುಧವಾರದಂದು ಪೊಲೀಸ್ ಕಸ್ಟಡಿಯಲ್ಲಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಶನಿವಾರ ನಡೆದ ಅವರ ಅಂತ್ಯಕ್ರಿಯೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಮೆಹರ್ಷಾದ್ ಶಾಹಿದಿ ತಮ್ಮ 20ನೇ ಹುಟ್ಟುಹಬ್ಬದ ಒಂದು ದಿನ ಮೊದಲು ನಿಧನರಾದರು ಎಂಬುದು ಗಮನಾರ್ಹ ಸಂಗತಿಯಾಗಿದೆ.
ಇರಾನ್ನ ಜೇಮಿ ಆಲಿವರ್ ಎಂದೂ ಹೆಸರುಗಳಿಸಿದ್ದ ಸೆಲೆಬ್ರಿಟಿ ಚೆಫ್ ಶಾಹಿದಿಪ್ ಇನ್ಸ್ಟಾದಲ್ಲಿ 25,000ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದರು ಮತ್ತು ಸ್ವತಃ ಅಡುಗೆ ಮಾಡುವ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಿದ್ದರು.
ಅರಾಕ್ ನಗರದಲ್ಲಿ ಇರಾನ್ನ ರೆವಲ್ಯೂಷನರಿ ಗಾರ್ಡ್ನ ವಶದಲ್ಲಿದ್ದ ಮೆಹರ್ಷಾದ್ ಶಾಹಿದಿ ಅವರ ತಲೆಗೆ ಗಂಭೀರವಾದ ಪೆಟ್ಟು ಬಿದ್ದು ಹತ್ಯೆಯಾಗಿದ್ದಾರೆ ಎಂದು ವರದಿಯಾಗಿದೆ.
"ನಮ್ಮ ಪುತ್ರನ ಬಂಧನದ ನಂತರ ಆತನ ತಲೆಗೆ ಬಿದ್ದ ಲಾಠಿ ಏಟಿನ ಪರಿಣಾಮ ಪ್ರಾಣ ಕಳೆದುಕೊಂಡಿದ್ದಾನೆ, ಆದರೆ ಆತ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಹೇಳಿಕೆ ನೀಡುವಂತೆ ಆಡಳಿತ ವ್ಯವಸ್ಥೆ ನಮಗೆ ಒತ್ತಡಹಾಕುತ್ತಿದೆ" ಎಂದು ಮೆಹರ್ಷಾದ್ ಅವರ ಪೋಷಕರು ಹೇಳಿಕೆ ನೀಡಿದ್ದಾರೆ.
ಇರಾನ್ ಅಧಿಕಾರಿಗಳು ಜೇಮಿಯ ಕಸ್ಟಡಿಯ ಹತ್ಯೆ ಆರೋಪವನ್ನು ತಳ್ಳಿಹಾಕಿದ್ದು, ಆತನ ಸಾವಿಗೆ ಕಾರಣವನ್ನು ಶೀಘ್ರ ಘೋಷಿಸಲಾಗುವುದು ಎಂದು ಹೇಳಿದ್ದಾರೆ.