ಸ್ಯಾನ್ ಪ್ರಾನ್ಸಿಸ್ಕೊ, ಅ 31 (DaijiworldNews/DB): ಟ್ವಿಟರ್ ಖಾತೆದಾರರ ಬ್ಲೂಟಿಕ್ಗೆ ಶುಲ್ಕ ವಿಧಿಸುವ ಬಗ್ಗೆ ಟ್ವಿಟರ್ ಸಂಸ್ಥೆ ಚಿಂತನೆ ನಡೆಸಿದ್ದು, ಮಾಸಿಕ $19.99 ಶುಲ್ಕ ನೀಡಿದಲ್ಲಿ ಮಾತ್ರ ಬ್ಲೂ ಟಿಕ್ ಸಿಗಲಿದೆ ಎಂದು ತಿಳಿದು ಬಂದಿದೆ.
ಟ್ವಿಟರ್ನ್ನು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡಿರುವ ಬೆನ್ನಲ್ಲೇ ಟ್ವಿಟರ್ನ ಕಾರ್ಯಚಟುವಟಿಕೆಗಳ ಸಂಪೂರ್ಣ ಪರಿಶೀಲನಾ ಪ್ರಕ್ರಿಯೆ ನಡೆಯುತ್ತಿದೆ. ಈ ಬಗ್ಗೆ ಸ್ವತಃ ಎಲಾನ್ ಮಸ್ಕ್ ಅವರೇ ಟ್ವೀಟ್ ಮಾಡಿ ತಿಳಿಸಿದ್ದಾರೆ. ಟ್ವಿಟರ್ನ್ನು ಖರೀದಿಸಿರುವ ಕೆಲವೇ ದಿನಗಳಲ್ಲಿ ಮಸ್ಕ್ ಅವರು ನೀಡಿರುವ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಈ ನಡುವೆ ಟ್ವಿಟರ್ ಖಾತೆದಾರರು ಇನ್ನು ಮುಂದೆ ಬ್ಲೂಟಿಕ್ ಪಡೆಯಬೇಕಾದರೆ ಅದಕ್ಕೆ ಮಾಸಿಕ ಶುಲ್ಕ ಪಾವತಿಸಬೇಕೆಂಬ ಚಿಂತನೆ ಟ್ವಿಟರ್ ಸಂಸ್ಥೆಯಲ್ಲಿ ನಡೆದಿದ್ದು, ಮಾಸಿಕ $19.99ಗಳನ್ನು ನಿಗದಿಪಡಿಸಲಾಗಿದೆ ಎನ್ನಲಾಗಿದೆ. ಆದರೆ ಇದಿನ್ನೂ ಅಂತಿಮಗೊಂಡಿಲ್ಲ. ಹೀಗಾಗಿ ಇದನ್ನು ಕೈ ಬಿಡುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ ಎಂದೂ ತಿಳಿದು ಬಂದಿದೆ.