ದಿ ಹೇಗ್ ಫೆ 20(MSP): ಕುಲಭೂಷಣ್ ಜಾಧವ್ ಪ್ರಕರಣ ಸಂಬಂಧ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪಾಕಿಸ್ತಾನ ತನ್ನ ವಾದ ಮಂಡನೆ ಮಾಡಿದೆ. ಆದರೆ ಪ್ರಕರಣದ ವಿಚಾರಣೆಯನ್ನು ಮುಂದೂಡಬೇಕು ಎಂದು ಪಾಕಿಸ್ತಾನ ಮಾಡಿಕೊಂಡ ಮನವಿಯನ್ನು ಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ಮಂಗಳವಾರ ತಿರಸ್ಕರಿಸಿತು.
ಪಾಕಿಸ್ತಾನ ಪರ ವಕೀಲರು, ಐಸಿಜೆಯಲ್ಲಿನ ಪಾಕ್ ಪರ ವಾದ ಮಾಡುವ ನ್ಯಾಯಮೂರ್ತಿ ತಸ್ಸಾದುಕ್ ಹುಸೇನ್ ಜಿಲಾನಿ ಅವರಿಗೆ ಹೃದಯಾಘಾತವಾಗಿದೆ ಹೀಗಾಗಿ ಅವರ ಸ್ಥಾನಕ್ಕೆ ಮತ್ತೊಬ್ಬ ನ್ಯಾಯಮೂರ್ತಿಯವರನ್ನು ನೇಮಿಸುವವರೆಗೆ ಪ್ರಕರಣ ಮುಂದೂಡುವಂತೆ ಪಾಕಿಸ್ತಾನದ ಅಟಾರ್ನಿ ಜನರಲ್ ಅನ್ವರ್ ಮನ್ಸೂರ್ ಖಾನ್ ಐಸಿಜೆ ಗೆ ಮನವಿ ಮಾಡಿಕೊಂಡರು. ಆದರೆ ಇದನ್ನು ತಿರಸ್ಕರಿಸಿದ ನ್ಯಾಯಾಲಯವು, ವಾದ ಮುಂದುವರಿಸುವಂತೆ ಸೂಚಿಸಿತು.
ಸೋಮವಾರ ಭಾರತ ಮಂಡಿಸಿದ ವಾದಕ್ಕೆ ಪ್ರತಿಕ್ರಿಯಿಸಿದ ಪಾಕ್ , ಕುಲಭೂಷಣ್ ಯಾದವ್ ಉದ್ಯಮಿಯಾಗಿದ್ದರು ಎಂಬ ಭಾರತದ ವಾದ ಸರಿಯಲ್ಲ. ಅವರು ಗೂಢಚಾರಿಯೇ ಆಗಿದ್ದರು ಎಂದು ಮತ್ತೆ ಕೋರ್ಟ್ ನಲ್ಲಿ ಪುನರುಚ್ಚರಿಸಿತು.
ಇದಕ್ಕೆ ತಿರುಗೇಟು ನೀಡಿದ ಭಾರತ, ಜಾಧವ್ ವಿರುದ್ಧ ಗಂಭೀರ ಆರೋಪಗಳನ್ನು ಪಾಕ್ ಸಾಬೀತುಪಡಿಸಿಲ್ಲ. ಜಾಧವ್ ಭೇಟಿಗೆ ಪಾಕ್ ಅವಕಾಶ ನೀಡಿಲ್ಲ. ಈ ಹಿಂದೆ ಸುಮಾರು 13 ಬಾರಿ ಮನವಿ ಮಾಡಿದರೂ ಕೂಡಾ ಅವಕಾಶ ಕೊಡುತ್ತಿಲ್ಲ. ಇದಲ್ಲದೆ ವಿಚಾರಣೆಗೆ ಸಂಬಂಧಿತೆಯೂ ದಾಖಲೆ ಪಾಕ್ ನೀಡಿಲ್ಲ. ಸಾಕ್ಷಿಗಳ ವಿಚಾರಣೆಗೂ ಅವಕಾಶ ನೀಡುತ್ತಿಲ್ಲ. ಭಾರತಕ್ಕೆ ಚಾರ್ಜ್ಶೀಟ್ ಪ್ರತಿಯನ್ನೂ ಕಳಿಸಿಲ್ಲ. ಈ ಮೂಲಕ ಪಾಕ್ ದ್ವಿಪಕ್ಷೀಯ ಒಪ್ಪಂದ ಉಲ್ಲಂಘಿಸಿದೆ ಎಂದು ವಾದ ಮಂಡಿಸಿದರು.
ಈ ನಡುವೆ ಕುಲಭೂಷಣ್ ಜಾಧವ್ ಅವರನ್ನು ಶೀಘ್ರವೇ ಬಿಡುಗಡೆಗೊಳಿಸಬೇಕು ಎಂಬ ಭಾರತದ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಪಾಕ್ ಐಸಿಜೆಯಲ್ಲಿ ವಾದ ಮಂಡಿಸಿತು. ವಾದ ಆಲಿಸಿದ ಐಸಿಜೆ, ಬುಧವಾರಕ್ಕೆ ವಿಚಾರಣೆಯನ್ನು ಮುಂದೂಡಿತು. ವಾದ ಮಂಡಿಸಲು ಭಾರತಕ್ಕೆ ಬುಧವಾರ 90 ನಿಮಿಷ ಮತ್ತು ಪಾಕಿಸ್ತಾನಕ್ಕೆ ಗುರುವಾರ 90 ನಿಮಿಷ ಕಾಲಾವಕಾಶ ನೀಡಲಾಗಿದೆ.