ಮೆಲ್ಬೋರ್ನ್, ನ 03 (DaijiworldNews/DB): 2018ರಲ್ಲಿ 24 ವರ್ಷದ ಆಸ್ಟ್ರೇಲಿಯಾ ಮಹಿಳೆಯನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಆರೋಪಿಯಾಗಿರುವ ಭಾರತೀಯ ಪ್ರಜೆಯ ಕುರಿತು ಮಾಹಿತಿ ನೀಡಿದವರಿಗೆ ಆಸ್ಟ್ರೇಲಿಯಾದ ಕ್ವೀನ್ಲ್ಯಾಂಡ್ ಪೊಲೀಸರು ಒಂದು ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ (633,000 ಅಮೆರಿಕನ್ ಡಾಲರ್) ಬಹುಮಾನ ಘೋಷಣೆ ಮಾಡಿದ್ದಾರೆ.
ಟೊಯಾಹ್ ಕಾರ್ಡಿಂಗ್ಲೆ (24) ಅವರ ಕೊಲೆ ಪ್ರಕರಣದಲ್ಲಿ ಭಾರತೀಯ ಪ್ರಜೆ ರಾಜ್ವಿಂದರ್ ಸಿಂಗ್ (38) ಎಂಬಾತ ಶಂಕಿತ ಆರೋಪಿಯಾಗಿದ್ದಾನೆ. ಆತ ಮೂಲತಃ ಭಾರತದ ಪಂಜಾಬ್ನ ಬುಟ್ಟಾರ್ ಕಲಾನ್ ಮೂಲದವನಾಗಿದ್ದು, ಕ್ವೀನ್ಲ್ಯಾಂಡ್ನಲ್ಲಿ ವಾಸಿಸುತ್ತಿದ್ದ. ಈತನ ಇರುವಿಕೆ ಬಗ್ಗೆ ಸುಳಿವು ನೀಡಿದವರಿಗೆ ಈ ಬಹುಮಾನ ನೀಡಲಾಗುವುದು ಎಂದು ಪೊಲೀಸರು ಹೇಳಿರುವುದಾಗಿ ವರದಿಯಾಗಿದೆ.
ಇನ್ನು ಈ ಪ್ರಕರಣ ಸಂಬಂಧಿಸಿ ದೆಹಲಿಯಲ್ಲಿರುವ ಆಸ್ಟ್ರೇಲಿಯಾದ ಫೆಡರಲ್ ಪೊಲೀಸರು ಕೇಂದ್ರೀಯ ತನಿಖಾ ದಳದೊಂದಿಗೆ ಕೆಲಸ ನಿರ್ವಹಿಸುತ್ತಿದ್ದಾರೆ.
2018ರ ಅಕ್ಟೋಬರ್ನಲ್ಲಿ ಮಹಿಳೆ ತನ್ನ ನಾಯಿಯೊಂದಿಗೆ ವಾಂಗೆಟ್ಟಿ ಬೀಚ್ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹತ್ಯೆಯಾಗಿದ್ದರು. ಈ ಪ್ರಕರಣದಲ್ಲಿ ಶಂಕಿತ ಆರೋಪಿಯಾಗಿದ್ದ ಸಿಂಗ್ ಘಟನೆ ನಡೆದ ಎರಡೇ ದಿನದಲ್ಲಿ ತಾನು ನಿರ್ವಹಿಸುತ್ತಿದ್ದ ನರ್ಸ್ ಹುದ್ದೆಯನ್ನು ತೊರೆದು, ಪತ್ನಿ, ಮಕ್ಕಳನ್ನು ಆಸ್ಟ್ರೇಲಿಯಾದಲ್ಲೇ ಬಿಟ್ಟು ಭಾರತಕ್ಕೆ ಪರಾರಿಯಾಗಿದ್ದ ಎನ್ನಲಾಗಿದೆ.