ರಷ್ಯಾ, ನ 05 (DaijiworldNews/DB): ರಷ್ಯಾದ ಕೋಸ್ಟ್ರೋಮಾದ ಬಾರ್ ಮತ್ತು ಕೆಫೆಯೊಂದರಲ್ಲಿ ಶುಕ್ರವಾರ ತಡರಾತ್ರಿ ಅಗ್ನಿ ದುರಂತ ಸಂಭವಿಸಿದ್ದು, 15 ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 250 ಮಂದಿ ಅಪಾಯದಿಂದ ಪಾರಾಗಿದ್ದಾರೆ.
ಮದ್ಯದ ನಶೆಯಲ್ಲಿದ್ದ ವ್ಯಕ್ತಿಯೊಬ್ಬ ಡ್ಯಾನ್ಸ್ಫ್ಲೋರ್ನಲ್ಲಿ ಫ್ಲೇರ್ಗನ್ನಿಂದ ಗುಂಡು ಹಾರಿಸಿರುವುದೇ ಅವಘಡಕ್ಕೆ ಕಾರಣ ಎನ್ನಲಾಗಿದೆ. ಗುಂಡು ಹಾರಿಸಿದ ಕೂಡಲೇ ಬೆಂಕಿ ಹತ್ತಿಕೊಂಡಿದ್ದು, ಕಟ್ಟಡದಾದ್ಯಂತ ಹರಡಿತ್ತು. ಈ ವೇಳೆ ಬಾರ್ ಮತ್ತು ಕೆಫೆಯಲ್ಲಿದ್ದ 15 ಮಂದಿ ಬೆಂಕಿಯಿಂದ ತೀವ್ರ ಸುಟ್ಟಗಾಯಗಳೊಂದಿಗೆ ಅಸುನೀಗಿದರು. ಸುಮಾರು 250 ಮಂದಿಯನ್ನು ಅಪಾಯದಿಂದ ಪಾರು ಮಾಡಲಾಗಿದೆ. ತಡರಾತ್ರಿ 2 ಗಂಟೆ ವೇಳೆಗೆ ಘಟನೆ ಸಂಭವಿಸಿದೆ ಎಂದು ಅಲ್ಲಿನ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಘಟನೆ ನಡೆದ ತತ್ಕ್ಷಣ ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿದ್ದು, ರಕ್ಷಣಾ ಕಾರ್ಯ ಹಾಗೂ ಬೆಂಕಿ ನಂದಿಸುವ ಕೆಲಸವನ್ನು ಸಮರೋಪಾದಿಯಲ್ಲಿ ನಡೆಸಿತು. ಶನಿವಾರ ಬೆಳಗ್ಗೆ 7.30ರ ವೇಳೆಗೆ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದೆ.
ಮದ್ಯಪಾನ ಮಾಡಿದ ವ್ಯಕ್ತಿ ಮಹಿಳೆಯೊಂದಿಗೆ ಬಾರ್ಗೆ ಬಂದಿದ್ದು, ಕೈಯಲ್ಲಿ ಫ್ಲೇರ್ಗನ್ ಹಿಡಿದುಕೊಂಡಿದ್ದ. ಬಳಿಕ ಡ್ಯಾನ್ಸ್ಫ್ಲೋರ್ಗೆ ತೆರಳಿದ ಆತ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ.