ಕೊಲಂಬೊ, ನ 06 (DaijiworldNews/DB): ಅಕ್ರಮ ಮೀನುಗಾರಿಕೆ ಆರೋಪದ ಮೇಲೆ ಸುಮಾರು 15 ಮಂದಿ ಭಾರತೀಯ ಮೀನುಗಾರರನ್ನು ಶ್ರೀಲಂಕಾದ ನೌಕಾಪಡೆ ಬಂಧಿಸಿದೆ. ಇದೇ ವೇಳೆ ಎರಡು ಟ್ರಾಲರ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮನ್ನಾರ್ ದ್ವೀಪದ ವಾಯುವ್ಯ ಕರಾವಳಿಯಲ್ಲಿರುವ ವಸಾಹತು ಪ್ರದೇಶವಾದ ತಲೈಮನ್ನಾರ್ನಲ್ಲಿ ಶನಿವಾರವೇ ಭಾರತೀಯ ಮೀನುಗಾರರನ್ನು ಬಂಧಿಸಿದ್ದು, ಈ ಬಗ್ಗೆ ಭಾನುವಾರ ನೌಕಾಪಡೆಯು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.
ಸದ್ಯ ಎಲ್ಲಾ 15 ಮಂದಿ ತಲೈಮನ್ನಾರ್ನಲ್ಲಿ ನೌಕಾಪಡೆಯ ವಶದಲ್ಲಿದ್ದು, ಶೀಘ್ರ ಅವರನ್ನು ಮೀನುಗಾರಿಕೆ ನಿರೀಕ್ಷಕರಿಗೆ ಹಸ್ತಾಂತರಿಸಲಾಗುವುದು ಎಂದಿರುವುದಾಗಿ ವರದಿಯಾಗಿದೆ.
ಹಲವು ಮಾತುಕತೆಗಳ ಹೊರತಾಗಿಯೂ ಭಾರತೀಯ ಮೀನುಗಾರರ ಅಕ್ರಮವಾಗಿ ಲಂಕಾದಲ್ಲಿ ಮೀನುಗಾರಿಕೆ ನಡೆಸಿದ್ದಾರೆ. ಅಂತಾರಾಷ್ಟ್ರೀಯ ಕಡಲ ಗಡಿ ರೇಖೆಯನ್ನು ದಾಟಿ ಶ್ರೀಲಂಕಾದಲ್ಲಿ ಮೀನುಗಾರಿಕೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಇವರನ್ನು ಬಂಧಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.