ತಾಂಜೇನಿಯಾ, ನ 06 (DaijiworldNews/DB): ದೇಶೀಯ ಪ್ರಯಾಣಿಕ ವಿಮಾನವೊಂದು ಲ್ಯಾಂಡಿಂಗ್ಗೆ ತುಸು ಮುನ್ನ ತಾಂಜೇನಿಯಾದ ವಿಕ್ಟೋರಿಯಾ ಸರೋವರಕ್ಕೆ ಬಿದ್ದ ಘಟನೆ ವಾಯುವ್ಯ ನಗರ ಬುಕೋಬಾದಲ್ಲಿ ಭಾನುವಾರ ಮುಂಜಾನೆ ನಡೆದಿದೆ. ಘಟನೆಯಲ್ಲಿ 49 ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಪ್ರೆಸಿಷನ್ ಏರ್ ವಿಮಾನವು ಅಪಘಾತಕ್ಕೀಡಾಗಿದೆ. ವಿಮಾನ ನಿಲ್ದಾಣದಿಂದ ಸುಮಾರು 100 ಮೀಟರ್ ದೂರದಲ್ಲಿ ಘಟನೆ ಸಂಭವಿಸಿದ್ದು, ಲ್ಯಾಂಡಿಂಗ್ ಆಗಲು ಇನ್ನೇನು ಕೆಲವೇ ನಿಮಿಷಗಳು ಬಾಕಿ ಇರುವಾಗ ವಿಮಾನ ಸರೋವರಕ್ಕೆ ಉರುಳಿ ಬಿದ್ದಿದೆ ಎಂದು ಪ್ರಾದೇಶಿಕ ಪೊಲೀಸ್ ಕಮಾಂಡರ್ ವಿಲಿಯಂ ಮ್ವಂಪಾಘಲೆ ಬುಕೋಬಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ವಿಮಾನದಲ್ಲಿ ಸುಮಾರು 49 ಮಂದಿ ಸಂಚರಿಸುತ್ತಿದ್ದರು ಎನ್ನಲಾಗಿದೆ. ಆದರೆ ಪ್ರಯಾಣಿಕರ ನಿಖರ ಸಂಖ್ಯೆ ತಿಳಿದುಬಂದಿಲ್ಲ. ಇವರೆಲ್ಲರೂ ದಾರ್ ಎಸ್ ಸಲಾಂನಿಂದ ಸರೋವರದ ಬದಿಯ ನಗರಕ್ಕೆ ಪ್ರಯಾಣಿಸುತ್ತಿದ್ದರು. ಸದ್ಯ ಸ್ಥಳದಲ್ಲಿ ಭದ್ರತಾ ತಂಡಗಳು ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.