ಬೋಸ್ಟನ್, ನ 08 (DaijiworldNews/DB): ಶೇ. 50ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದ್ದ ಎಲಾನ್ ಮಸ್ಕ್ ಒಡೆತನದ ಟ್ವಿಟರ್ ಸಂಸ್ಥೆ ಇದೀಗ ಯೂಟರ್ನ್ ಹೊಡೆದಿದ್ದು, ವಜಾಗೊಂಡವರ ಪೈಕಿ ಹಲವು ಉದ್ಯೋಗಿಗಳನ್ನು ಮತ್ತೆ ಕೆಲಸಕ್ಕೆ ಹಾಜರಾಗುವಂತೆ ಮನವಿ ಮಾಡಿಕೊಂಡಿದೆ.
ತಪ್ಪು ಗ್ರಹಿಕೆಯ ಮೇರೆಗೆ ಕೆಲವು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಮಸ್ಕ್ ಆಲೋಚನೆಗನುಗುಣವಾಗಿ ಅನುಭವ ಮತ್ತು ಹೊಸ ವೈಶಿಷ್ಟ್ಯದ ಕೆಲಸದ ಅಗತ್ಯದ ಅರಿವಿಲ್ಲದೇ ಮ್ಯಾನೇಜ್ಮೆಂಟ್ ಈ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿತ್ತು. ಇದೀಗ ಇದು ತಪ್ಪು ಎಂಬ ಬಗ್ಗೆ ತಿಳಿದ ಬಳಿಕ ವಜಾಗೊಂಡ ಉದ್ಯೋಗಿಗಳ ಪೈಕಿ ಹಲವರನ್ನು ವಾಪಾಸ್ ಬರಲು ಸಂಸ್ಥೆ ವಿನಂತಿಸಿದೆ ಎಂದು ಟ್ವಿಟರ್ನ ಉನ್ನತ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಕಳೆದ ಶುಕ್ರವಾರ 3,700 ಮಂದಿಯನ್ನು ಟ್ವಿಟರ್ ಸಂಸ್ಥೆ ಕೆಲಸದಿಂದ ತೆಗೆದು ಹಾಕಿತ್ತು. ಟ್ವಿಟರ್ನಲ್ಲಿ ಕೆಲಸ ಮಾಡುತ್ತಿದ್ದ ಭಾರತದ 230 ಮಂದಿ ಉದ್ಯೋಗಿಗಳ ಪೈಕಿ180 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದರು.
ಇದೇ ವೇಳೆ ಟ್ವಿಟರ್ನಲ್ಲಿ ನಕಲಿ ಖಾತೆಗಳನ್ನು ಹೊಂದಿದ್ದರೆ, ಅಥವಾ ಬೇರೆಯವರ ಹೆಸರು ಮತ್ತು ಪ್ರೊಫೈಲ್ ಚಿತ್ರಗಳನ್ನು ತಮ್ಮ ಖಾತೆಗಳಿಗೆ ಅಳವಡಿಸಿಕೊಂಡಿದ್ದಲ್ಲಿ ಅಂತಹ ಖಾತೆಗಳನ್ನು ಶಾಶ್ವತವಾಗಿ ತೆಗೆದು ಹಾಕಲಾಗುವುದು ಎಂದು ಇದೇ ವೇಳೆ ಮಸ್ಕ್ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕದ ಕಾಮಿಡಿಯನ್ ಕ್ಯಾಥಿ ಗ್ರಿಫಿನ್ ಅವರು ತಮ್ಮ ಟ್ವಿಟರ್ ಖಾತೆಯ ಸ್ಕ್ರೀನ್ ಹೆಸರನ್ನು ಮಸ್ಕ್ ಎಂದು ಹಾಕಿಕೊಂಡಿದ್ದು, ಮಾಸಿಕ 8 ಡಾಲರ್ ವಿಧಿಸುವ ಮಸ್ಕ್ ನಿರ್ಧಾರವನ್ನು ವ್ಯಂಗ್ಯಕ್ಕೆ ಬಳಸಿಕೊಂಡಿದ್ದರು. ಈ ಕಾರಣಕ್ಕಾಗಿ ಅವರ ಟ್ವಿಟರ್ ಖಾತೆಯನ್ನು ಅಮಾನತುಗೊಳಿಸಲಾಗಿದ್ದು, ಖಾತೆಯನ್ನು ಮತ್ತೆ ಚಾಲ್ತಿಗೊಳಿಸಲು 8 ಡಾಲರ್ ಪಾವತಿ ಮಾಡಬೇಕು ಎಂದು ಅವರಿಗೆ ಸೂಚಿಸಲಾಗಿದೆ.
ಇನ್ನು ಎಲಾನ್ ಮಸ್ಕ್ ಚಿತ್ರವನ್ನು ಪ್ರೊಫೈಲ್ ಫೋಟೋ ಮಾಡಿಕೊಂಡು ಹಿಂದಿಯಲ್ಲಿ ಜೋಕ್ಗಳನ್ನು ಪ್ರಕಟಿಸಿದ್ದ ಮೆಲ್ಬೋರ್ನ್ನ ಲಾ ಟ್ರೋಬ್ ವಿಶ್ವವಿದ್ಯಾಲಯದ ಹಿಂದಿ ಪ್ರೊಫೆಸರ್ ಇಯಾನ್ ವೂಲೋರ್ಡ್ ಅವರ ಖಾತೆಯನ್ನೂ ವಜಾ ಮಾಡಲಾಗಿದೆ ಎಂದು ತಿಳಿದು ಬಂದಿದೆ.