ಮಾಲೆ (ಮಾಲ್ಡೀವ್ಸ್), ನ 10 (DaijiworldNews/DB): ಮಾಲ್ಡೀವ್ಸ್ನ ರಾಜಧಾನಿ ಮಾಲೆಯಲ್ಲಿನ ವಸತಿಗೃಹವೊಂದರಲ್ಲಿ ಭಾರೀ ಅಗ್ನಿದುರಂತ ಸಂಭವಿಸಿದ್ದು, ಘಟನೆಯಲ್ಲಿ 9 ಮಂದಿ ಭಾರತೀಯರು ಸೇರಿದಂತೆ 10 ಮಂದಿ ಮೃತಪಟ್ಟಿದ್ದಾರೆ.
ವಿದೇಶೀ ಕಾರ್ಮಿಕರು ವಾಸವಾಗಿರುವ ಇಕ್ಕಟ್ಟಾಗಿರುವ ವಸತಿಗೃಹದಲ್ಲಿ ಘಟನೆ ಸಂಭವಿಸಿದೆ. ನೆಲ ಮಹಡಿಯಲ್ಲಿ ವಾಹನ ದುರಸ್ತಿ ಗ್ಯಾರೇಜ್ ಇದ್ದು, ಅಲ್ಲಿ ಅಗ್ನಿ ದುರಂತ ಸಂಭವಿಸಿ ಮೇಲಿನ ವಾಸಸ್ಥಾನಗಳಿಗೂ ವ್ಯಾಪಿಸಿದೆ. ಮೃತದೇಹಗಳನ್ನು ಕಟ್ಟಡದಿಂದ ಹೊರ ತೆಗೆಯಲಾಗಿದೆ. ಘಟನೆಯಲ್ಲಿ ಮೃತಪಟ್ಟವರ ಪೈಕಿ ಓರ್ವ ಬಾಂಗ್ಲಾದೇಶೀಯನಾಗಿದ್ದರೆ, ಉಳಿದ ಒಂಬತ್ತು ಮಂದಿ ಭಾರತೀಯರಾಗಿದ್ದಾರೆಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ಇನ್ನು ಘಟನೆ ಸಂಬಂಧ ಮಾಲ್ಡೀವ್ಸ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸಂತಾಪ ವ್ಯಕ್ತಪಡಿಸಿದೆ. ಟ್ವೀಟ್ ಮಾಡಿರುವ ಕಚೇರಿ ಅಧಿಕಾರಿಗಳು, ದುಃಖಕರ ಘಟನೆ ಇದು. ಮಾಲ್ಡೀವ್ ಅಧಿಕಾರಿಗಳೊಂದಿಗೆ ಕಚೇರಿಯು ನಿರಂತರ ಸಂಪರ್ಕದ ಲ್ಲಿದೆ. ಯಾವುದೇ ಸಹಾಯ ಅಗತ್ಯವಿದ್ದಲ್ಲಿ ರಾಯಭಾರಿ ಕಚೇರಿಯ +9607361452 ; +9607790701 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.