ಟೆಕ್ಸಾಸ್, ನ 13 (DaijiworldNews/DB): ಡಲ್ಲಾಸ್ನಲ್ಲಿ ನಡೆದ ವೈಮಾನಿಕ ಪ್ರದರ್ಶನದಲ್ಲಿ ಎರಡನೇ ವಿಶ್ವಯುದ್ದ ಕಾಲದ ವಿಮಾನಗಳೆರಡರ ನಡುವೆ ಢಿಕ್ಕಿ ಸಂಭವಿಸಿ ಸಿಬಂದಿ ಸೇರಿ ಆರು ಮಂದಿ ಸಾವನ್ನಪ್ಪಿದ್ದಾರೆ.
ಎರಡನೇ ಮಹಾಯುದ್ಧದ ಕಾಲದ ಬೋಯಿಂಗ್ ಬಿ-17 ಫ್ಲೈಯಿಂಗ್ ಫೋರ್ಟ್ರೆಸ್ ಬಾಂಬರ್ ಮತ್ತು ಬೆಲ್ ಪಿ-63 ಕಿಂಗ್ಕೋಬ್ರಾ ಫೈಟರ್ ಯುದ್ದ ವಿಮಾನಗಳ ನಡುವೆ ಢಿಕ್ಕಿ ಸಂಭವಿಸಿದೆ. ಡಲ್ಲಾಸ್ ಎಕ್ಸಿಕ್ಯೂಟಿವ್ ಏರ್ಪೋರ್ಟ್ನಲ್ಲಿ ಶನಿವಾರ ನಡೆದ ವೈಮಾನಿಕ ಪ್ರದರ್ಶನದಲ್ಲಿ ಮಧ್ಯಾಹ್ನ ಸುಮಾರು 1.20ಕ್ಕೆ ಘಟನೆ ನಡೆಯಿತು. ವಿಮಾನಗಳ ವಿಂಗ್ಸ್ ಪರಸ್ಪರ ತಗುಲಿ ಢಿಕ್ಕಿ ಸಂಭವಿಸಿ ಅಪಘಾತ ನಡೆದಿದೆ ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ತಿಳಿಸಿರುವುದಾಗಿ ವರದಿಯಾಗಿದೆ.
ಘಟನೆ ನಡೆದ ಕೂಡಲೇ ರಕ್ಷಣಾ ತಂಡಗಳು ಸ್ಥಳಕ್ಕಾಗಮಿಸಿ ತುರ್ತು ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಸಿಬಂದಿ ಸೇರಿ ಆರು ಮಂದಿ ಘಟನೆಯಲ್ಲಿ ಸಾವನ್ನಪ್ಪಿದರು ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.