ವಾಷಿಂಗ್ಟನ್, ನ 17 (DaijiworldNews/DB): ಮದುವೆ ದಿನ ವಧು-ವರರು ವೈವಿಧ್ಯ ರೀತಿಯಲ್ಲಿ ಮಂಟಪಕ್ಕೆ ಎಂಟ್ರಿ ಕೊಡುವುದು ಸಾಮಾನ್ಯ. ಆದರೆ ಇಲ್ಲೊಂದು ಮದುವೆಯಲ್ಲಿ ವರನನ್ನು ಶವದ ಪೆಟ್ಟಿಗೆಯಲ್ಲಿಟ್ಟು ಮಂಟಪಕ್ಕೆ ಕರೆ ತರಲಾಗಿದೆ!
ಅಮೆರಿಕದಲ್ಲಿ ಇಂತಹದೊಂದು ವಿಚಿತ್ರ ಮದುವೆ ನಡೆದಿದೆ. ಮದುವೆ ಹೆಣ್ಣು ಸಿಂಗಾರಗೊಂಡು ವರನಿಗಾಗಿ ಕಾಯುತ್ತಿದ್ದಳು. ಅಲ್ಲಿದ್ದವರೆಲ್ಲ ಮದುವೆ ಸೊಬಗನ್ನು ಕಣ್ತುಂಬಿಕೊಳ್ಳಲು ಸಿದ್ದರಾಗಿದ್ದರು. ಆ ವೇಳೆ ಕಾರೊಂದು ಬಂದು ಅಲ್ಲಿ ನಿಂತಿತು. ಕಾರಿನಿಂದಿಳಿದ ಕೆಲವರು ಹಿಂಬದಿಯಿಂದ ಶವ ಪೆಟ್ಟಿಗೆಯನ್ನು ಹೊರ ತೆಗೆದು ನಾಲ್ಕೈದು ಮಂದಿ ಅದನ್ನು ಮಂಟಪಕ್ಕೆ ಹೊತ್ತು ತಂದಿದ್ದಾರೆ. ಬಳಿಕ ವರನು ಶವ ಪೆಟ್ಟಿಗೆಯಿಂದ ಎದ್ದು ಹೊರ ಬಂದಿದ್ದಾನೆ.
ಶವ ಪೆಟ್ಟಿಗೆಯಲ್ಲಿ ವರನನ್ನು ಮಂಟಪಕ್ಕೆ ಕರೆ ತಂದ ಬಗ್ಗೆ ಅಲ್ಲಿದ್ದವರೆಲ್ಲರಿಗೂ ಶಾಕ್ ಆಗಿದೆ. ಒಟ್ಟಿನಲ್ಲಿ ವರನ ಸ್ನೇಹಿತರ ಕಿತಾಪತಿಯಿಂದಾಗಿ ವರನ ಈ ವಿಚಿತ್ರ ಎಂಟ್ರಿಗೆ ಮದುವೆಗೆ ಬಂದ ಅತಿಥಿಗಳು ಆತಂಕಗೊಂಡಿದ್ದರು.