ಸಿಯೋಲ್, ನ 19 (DaijiworldNews/DB): ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರು ತನ್ನ ಪುತ್ರಿಯ ಮುಖವನ್ನು ಇದೇ ಮೊದಲ ಬಾರಿಗೆ ಜಗತ್ತಿಗೆ ತೋರಿಸಿದ್ದಾರೆ. ಕ್ಷಿಪಣಿ ಉಡಾವಣೆಗೂ ಮುನ್ನ ಕ್ಷಿಪಣಿಯ ಪರಿಶೀಲನೆಗಾಗಿ ಮಗಳನ್ನು ಕೈ ಹಿಡಿದು ಕರೆದೊಯ್ಯುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪರಮಾಣು ಶಸ್ತ್ರಸಜ್ಜಿತ ದೇಶದ ಅತಿದೊಡ್ಡ ಬ್ಯಾಲಿಸ್ಟಿಕ್ ಕ್ಷಿಪಣಿಯ ಉಡಾವಣೆಯನ್ನು ಉಡಾವಣೆಗೂ ಮುನ್ನ ಪರಿಶೀಲನೆ ನಡೆಸುವುದಕ್ಕಾಗಿ ತರಳುವ ವೇಳೆ ಶುಕ್ರವಾರ ಕಿಮ್ ಜಾಂಗ್ ತಮ್ಮ ಮಗಳನ್ನೂ ಕರೆದೊಯ್ದಿದ್ದಾರೆ. ಈವರೆಗೆ ಅವರ ಮಗಳ ಮುಖವನ್ನು ಅವರು ಜಗತ್ತಿನೆದುರು ತೋರಿಸಿರಲಿಲ್ಲ. ಇದೇ ಮೊದಲ ಬಾರಿ ಅವರು ಮಗಳ ಮುಖವನ್ನು ತೋರಿಸಿದ್ದಾರೆ ಎನ್ನಲಾಗಿದೆ. ಆದರೆ ಅವರ ಹೆಸರು ತಿಳಿದು ಬಂದಿಲ್ಲ. ಆಕೆಗೆ 12-13 ವರ್ಷ ಆಗಿರಬಹುದೆಂದು ಅಂದಾಜಿಸಲಾಗಿದೆ.
ಬಿಳಿ ಪಫಿ ಕೋಟ್ ಧರಿಸಿರುವ ಕಿಮ್ ಮಗಳು ತಂದೆಯೊಂದಿಗೆ ತೆರಳಿ ಬೃಹತ್ ಕ್ಷಿಪಣಿಯನ್ನು ವೀಕ್ಷಿಸಿದ್ದಾರೆ. ಇನ್ನು ಕಿಮ್ ಮಗಳನ್ನು ಇದೇ ಮೊದಲು ನೋಡುತ್ತಿದ್ದೇವೆ ಎಂದು ಯುಎಸ್ ಮೂಲದ ಸ್ಟಿಮ್ಸನ್ ಕೇಂದ್ರದ ಉತ್ತರ ಕೊರಿಯಾ ತಜ್ಞ ಮೈಕೆಲ್ ಮ್ಯಾಡೆನ್ ಹೇಳಿಕೊಂಡಿದ್ದಾರೆ.
ಇಬ್ಬರು ಹೆಣ್ಣು ಹಾಗೂ ಓರ್ವ ಗಂಡು ಮಕ್ಕಳನ್ನು ಕಿಮ್ ಹೊಂದಿದ್ದಾರೆ. ಓರ್ವ ಮಗಳು ನಾಯಕತ್ವ ಸ್ವೀಕಾರಕ್ಕೆ ತರಬೇತಿ ಪಡೆಯುತ್ತಿದ್ದಾಳೆ ಎಂದು ಹೇಳಲಾಗಿದೆ.