ಟೆಹ್ರಾನ್, ನ 21 (DaijiworldNews/DB): ಸಾರ್ವಜನಿಕವಾಗಿ ತಲೆ ಮೇಲಿನ ಸ್ಕಾರ್ಪ್ ತೆಗೆದ ನಟಿಯನ್ನು ಇರಾನ್ ಸರ್ಕಾರ ಬಂಧಿಸಿದ ಘಟನೆ ಇರಾನ್ನಲ್ಲಿ ಭಾನುವಾರ ನಡೆದಿದೆ.
ನಟಿ ಹೆಂಗಮೆಹ್ ಘಜಿಯಾನಿ (52 ) ಬಂಧಿತರು. ಹಿಜಾಬ್ ವಿರೋಧಿ ಪ್ರತಿಭಟನೆ ಇರಾನ್ನಾದ್ಯಂತ ನಡೆಯುತ್ತಿದ್ದು, ಹಿಜಾಬ್ ವಿರೋಧಿಸಿ ಹಲವು ಮಹಿಳೆಯರು ಬೀದಿಗಿಳಿದಿದ್ದಾರೆ. ಈ ನಡುವೆ ವೀಡಿಯೋ ಮಾಡಿ ತಲೆಯ ಸ್ಕಾರ್ಪ್ನ್ನು ತೆಗೆದು ಅದನ್ನು ಸಾರ್ವಜನಿಕಗೊಳಿಸಿದ ನಟಿಯನ್ನು ಸರ್ಕಾರ ಬಂಧಿಸಿದೆ. ಹೆಂಗಮೆಹ್ ಘಜಿಯಾನ್ ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ. ಅವರು ವಿರೋಧಿಗಳೊಂದಿಗೆ ಸಂವಹನ ನಡೆಸಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ ಎಂದು ಇರಾನ್ ಸರ್ಕಾರ ತಿಳಿಸಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ನ್ಯಾಯಾಲಯದಿಂದ ಸಮನ್ಸ್ ನೀಡಲಾಗಿದೆ ಎಂದಿದ್ದ ನಟಿ, ಬಳಿಕ ತಾವು ಹಿಜಾಬ್ ತೆಗೆಯುತ್ತಿರುವ ವೀಡಿಯೋವನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದರು. ಅಲ್ಲದೆ ಬಹುಶಃ ಇದು ನನ್ನ ಕೊನೆಯ ಪೋಸ್ಟ್ ಆಗಿರಬಹುದು ಎಂದೂ ಬರೆದಿದ್ದರು.