ನೈಜೀರಿಯಾ, ನ 23 (DaijiworldNews/DB): ಮೂರು ಬಸ್ಗಳ ನಡುವೆ ಢಿಕ್ಕಿ ಸಂಭವಿಸಿ ಕನಿಷ್ಠ 37 ಮಂದಿ ಪ್ರಯಾಣಿಕರು ಮೃತಪಟ್ಟ ಘಟನೆ ಈಶಾನ್ಯ ನೈಜೀರಿಯಾದ ಮೈದುಗುರಿ ನಗರದ ಹೊರ ವಲಯದಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಸಸಂಚರಿಸುತ್ತಿದ್ದ ಬಸ್ನ ಟಯರ್ ಸ್ಪೋಟಗೊಂಡು ನಿಯಂತ್ರಣ ಕಳೆದುಕೊಂಡಿದೆ. ಈ ವೇಳೆ ಮುಂಭಾಗದಿಂದ ಬರುತ್ತಿದ್ದ ಇನ್ನೊಂದು ಬಸ್ಗೆ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಒಂದು ಬಸ್ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಇದೇ ವೇಳೆ ಈ ಮಾರ್ಗವಾಗಿ ಬರುತ್ತಿದ್ದ ಮತ್ತೊಂದು ಬಸ್ ಎರಡೂ ಬಸ್ಗಳಿಗೆ ಢಿಕ್ಕಿ ಹೊಡೆದಿದಿದ್ದು, ಈ ಬಸ್ಗೂ ಬೆಂಕಿ ಹೊತ್ತಿಕೊಂಡಿದೆ.
ಘಟನೆಯಲ್ಲಿ ಕನಿಷ್ಠ 37 ಮಂದಿ ಪ್ರಯಾಣಿಕರು ಸಾವಿಗೀಡಾಗಿದ್ದಾರೆ. ಈ ಪೈಕಿ ಹಲವರು ಸುಟ್ಟು ಕರಕಲಾಗಿರುವುದರಿಂದ ಅವರ ಗುರುತು ಪತ್ತೆ ಸಾಧ್ಯವಾಗುತ್ತಿಲ್ಲ ಎಂದು ಬೊರ್ನೊ ರಾಜ್ಯದ ರಸ್ತೆ ಸುರಕ್ಷತಾ ಏಜೆನ್ಸಿಯ ಮುಖ್ಯಸ್ಥ ಉಟೆನ್ ಬೋಯಿ ಹೇಳಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.