ಸೀಮ್ ರೀಪ್ (ಕಾಂಬೋಡಿಯಾ), ನ 23 (DaijiworldNews/DB): ಅಂತಾರಾಷ್ಟ್ರೀಯ ಮತ್ತು ಗಡಿಯಾಚೆಗಿನ ಭಯೋತ್ಪಾದನೆ ಜಗತ್ತಿಗೆ ಅತಿದೊಡ್ಡ ಸವಾಲಾಗಿದ್ದು, ಇದರ ನಿರ್ಮೂಲನೆಗೆ ಅಂತಾರಾಷ್ಟ್ರೀಯ ಸಮುದಾಯದ ತುರ್ತು ಮಧ್ಯಸ್ಥಿಕೆ ತುಂಬಾ ಅವಶ್ಯಕ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಕಾಂಬೋಡಿಯಾದ ಸೀಮ್ ರೀಪ್ನಲ್ಲಿ ಎಡಿಎಂಎಂ ಪ್ಲಸ್ ಕೂಟದ ಸಂದರ್ಭದಲ್ಲಿ 9ನೇ ಆಸಿಯಾನ್ ರಕ್ಷಣಾ ಮಂತ್ರಿಗಳ ಸಭೆಯನ್ನುದ್ದೇಶಿಸಿ ಅವರು ಬುಧವಾರ ಮಾತನಾಡಿದರು.
ಜಾಗತಿಕವಾಗಿ ಹಲವರನ್ನು ಈ ಭಯೋತ್ಪಾದನೆಯು ಬಲಿ ತೆಗೆದುಕೊಂಡಿದೆ. ಅಂತಾರಾಷ್ಟ್ರೀಯ ಸಮುದಾಯವು ಭಯೋತ್ಪಾದನೆ ಮಟ್ಟ ಹಾಕಲು ಒಗ್ಗೂಡಬೇಕು. ಇದರಲ್ಲಿ ಉದಾಸೀನ ಪ್ರವೃತ್ತಿ ಗಂಭೀರ ಸಮಸ್ಯೆಗೆ ತೋರುವ ಪ್ರತಿಕ್ರಿಯೆಯಲ್ಲ ಎಂದು ಪ್ರತಿಪಾದಿಸಿದರು.
ಹೊಸ ತಂತ್ರಜ್ಞಾನ ಬಳಸಿಕೊಂಡು ತಮ್ಮ ಗುಂಪನ್ನು ದೊಡ್ಡದಾಗಿಸಲು ಮತ್ತು ಹಣ ಕ್ರೋಢೀಕರಣಕ್ಕೆ ಭಯೋತ್ಪಾದಕರು ಮುಂದಾಗಿದ್ದಾರೆ. ಇದೊಂದು ಬೆದರಿಕೆಯಾಗಿದ್ದು, ಜಾಗತಿಕ ಸವಾಲಾಗಿರುವ ಭಯೋತ್ಪಾದನೆಯನ್ನು ಬುಡ ಸಮೇತ ಕಿತ್ತೊಯ್ಯುವ ನಿಟ್ಟಿನಲ್ಲಿ ದೃಢವಾದ ಹೆಜ್ಜೆಯನ್ನು ಅಂತಾರಾಷ್ಟ್ರೀಯ ಸಮುದಾಯ ಇಡಬೇಕಿದೆ ಎಂದರು.