ವಿಶ್ವಸಂಸ್ಥೆ, ನ 24 (DaijiworldNews/MS): ಕೋವಿಡ್ ಬಳಿಕ ದಡಾರ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆ ಕಡಿಮೆಯಾಗಿದ್ದು, ಇದರಿಂದ ಅಪಾಯ ಹೆಚ್ಚಳವಾಗುವ ಸಾಧ್ಯತೆ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ, ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಜಂಟಿ ವರದಿಯಲ್ಲಿ ತಿಳಿಸಿದೆ.
2021ರಲ್ಲಿ ಸುಮಾರು 40 ಮಿಲಿಯನ್ ಮಕ್ಕಳು 2 ಡೋಸ್ ದಡಾರ ಲಸಿಕೆ ಹಾಕಿಸಿಕೊಂಡಿಲ್ಲ, ವಿಶ್ವದಾದ್ಯಂತ ಸುಮಾರು 9 ಮಿಲಿಯನ್ ದಡಾರ ಸೋಂಕುಗಳು, 128,000 ಸಾವುಗಳು ಸಂಭವಿಸಿವೆ. ಅಭಿವೃದ್ಧಿ ಶೀಲರಾಷ್ಟ್ರಗಳಲ್ಲಿ ಈ ಸಮಸ್ಯೆ ಹೆಚ್ಚಾಗಿದೆ ಎಂದು ಹೇಳಿದೆ.
2022 ರ ಜನವರಿ ಮತ್ತು ಫೆಬ್ರವರಿಯಲ್ಲಿ ಕಾಣಿಸಿಕೊಂಡ ದಡಾರ ಪ್ರಕರಣಗಳ ಹೆಚ್ಚಳವು ಲಸಿಕೆ-ತಡೆಗಟ್ಟಬಹುದಾದ ರೋಗಗಳ ಹರಡುವಿಕೆಗೆ ಹೆಚ್ಚಿನ ಅಪಾಯದ ಆತಂಕಕಾರಿ ಸಂಕೇತವಾಗಿದೆ ಎಂದು ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಮಕ್ಕಳ ತುರ್ತು ನಿಧಿ (UNICEF), ವಿಶ್ವ ಆರೋಗ್ಯ ಸಂಸ್ಥೆ (WHO) ಈ ಹಿಂದೆಯೂ ಎಚ್ಚರಿಕೆ ನೀಡಿತ್ತು.
2022 ರ ಜನವರಿ ಮತ್ತು ಫೆಬ್ರವರಿಯಲ್ಲಿ ಪ್ರಪಂಚದಾದ್ಯಂತ ಸುಮಾರು 17,338 ದಡಾರ ಪ್ರಕರಣಗಳು ವರದಿಯಾಗಿದ್ದು, 2021 ರ ಮೊದಲ ಎರಡು ತಿಂಗಳುಗಳಲ್ಲಿ ಈ ಸಂಖ್ಯೆ 9,665 ರಷ್ಟಿತ್ತು. ಈ ಸಮಸ್ಯೆಯಿಂದಾಗಿ ದೇಹದ ಮೇಲೆ ಅದರ ನೇರ ಪರಿಣಾಮವು ಮಾರಕವಾಗಬಹುದು, ದಡಾರ ವೈರಸ್ ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಮತ್ತು ನ್ಯುಮೋನಿಯಾ ಮತ್ತು ಅತಿಸಾರದಂತಹ ಇತರ ಸಾಂಕ್ರಾಮಿಕ ಕಾಯಿಲೆಗಳು ಮಗುವನ್ನು ಹೆಚ್ಚು ದುರ್ಬಲಗೊಳಿಸುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿತ್ತು.