ಬೀಜಿಂಗ್, ನ 24 (DaijiworldNews/DB): ಚೀನಾದಲ್ಲಿ ಕೋವಿಡ್-19 ಮತ್ತೆ ಏರಿಕೆಯಾದ ಹಿನ್ನೆಲೆಯಲ್ಲಿ ಬೀಜಿಂಗ್ ಸೇರಿದಂತೆ ಹಲವೆಡ್ ಲಾಕ್ಡೌನ್ ಹೇರಲಾಗಿದೆ. ಝೆಂಗ್ಝೌ ಫಾಕ್ಸ್ಕಾನ್ನ ಪ್ರಮುಖ ಐಫೋನ್ ಸ್ಥಾವರದಲ್ಲಿ ಪ್ರತಿಭಟನೆ ಭುಗಿಲೆದ್ದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಈ ಸಂಬಂಧ ನಗರ ಪ್ರಾಧಿಕಾರದ ಅಧಿಕಾರಿಗಳು ಮಾತನಾಡಿ, ಡೌನ್ಟೌನ್ ಪ್ರದೇಶದ ನಿವಾಸಿಗಳಿಗೆ ಶುಕ್ರವಾರದಿಂದ ಮಂಗಳವಾರದವರೆಗೆ ಮನೆಯೊಳಗೇ ಇರುವಂತೆ ಸೂಚಿಸಲಾಗಿದೆ. ಇಲ್ಲಿ ಹೊಸ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿರುವ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಕಳೆದೊಂದು ದಿನದಲ್ಲಿ ಹೊಸ ಪ್ರಕರಣಗಳ ಸಂಖ್ಯೆ 31,444 ರಷ್ಟು ಹೆಚ್ಚಾಗಿದ್ದು, ವುಹಾನ್ನಲ್ಲಿ 2019ರ ವರ್ಷಾಂತ್ಯದಲ್ಲಿ ಪತ್ತೆಯಾದ ಪ್ರಕರಣಗಳಿಗಿಂತ ಹೆಚ್ಚಿನ ಪ್ರಮಾಣ ಇದಾಗಿದೆ. ಹೀಗಾಗಿ ಲಾಕ್ಡೌನ್ಗೆ ಚೀನಾ ಮುಂದಾಗಿದೆ ಎನ್ನಲಾಗಿದೆ.
ಬೀಜಿಂಗ್ ಇಂಟರ್ನ್ಯಾಶನಲ್ ಸ್ಟಡೀಸ್ ವಿಶ್ವವಿದ್ಯಾಲಯದಲ್ಲಿ ವೈರಸ್ ಪ್ರಕರಣ ಕಂಡು ಬಂದ ಬಳಿಕ ಅಲ್ಲಿ ಪ್ರವೇಶ ನಿರ್ಬಂಧಿಸಲಾಗಿದೆ. ಇನ್ನು ಕೆಲವು ಶಾಪಿಂಗ್ ಮಾಲ್ಗಳು ಮತ್ತು ಕಚೇರಿ ಕಟ್ಟಡಗಳನ್ನು ಮುಚ್ಚಲಾಗಿದ್ದು, ವಸತಿ ಕಟ್ಟಡಗಳಿಗೆ ಪ್ರವೇಶ ತಡೆ ಹಿಡಿಯಲಾಗಿದೆ ಎಂದು ವರದಿಗಳು ತಿಳಿಸಿವೆ.