ಮೆಕ್ಸಿಕೊ ಸಿಟಿ, ನ 27 (DaijiworldNews/DB): ನವಜಾತ ಶಿಶುವೊಂದು 2 ಇಂಚು ಉದ್ದದ ಬಾಲದೊಂದಿಗೆ ಜನಸಿದ ಘಟನೆ ಮೆಕ್ಸಿಕೋ ಸಿಟಿಯಲ್ಲಿರುವ ನ್ಯೂವೋ ಲಿಯಾನ್ ಆಸ್ಪತ್ರೆಯಲ್ಲಿ ನಡೆದಿದೆ.
ಈ ಆಸ್ಪತ್ರೆಯಲ್ಲಿ ಇತ್ತೀಚೆಗೆ ಜನಿಸಿದ ಹೆಣ್ಣು ಮಗುವೊಂದಕ್ಕೆ 2 ಇಂಚು ಉದ್ದದ ಬಾಲ ಇರುವುದು ಗೊತ್ತಾಗಿದೆ. ಬಳಿಕ ಕೂಡಲೇ ಬಾಲವನ್ನು ಶಸ್ತ್ರಚಿಕಿತ್ಸೆ ನಡೆಸಿ ಹೊರ ತೆಗೆಯಲಾಯಿತು ಎಂದು ವೈದ್ಯರು ತಿಳಿಸಿದ್ದಾರೆ.
ಬಾಲವು 5.7 ಸೆಂ.ಮೀಟರ್ ಉದ್ದವಿದ್ದು, ಮೃದುವಾಗಿತ್ತು. ಕೂದಲನ್ನೂ ಹೊಂದಿತ್ತು. ಪ್ರಾಣಿಗಳಲ್ಲಿರುವಂತೆ ಮೇಲ್ಭಾಗದಲ್ಲಿ ದಪ್ಪವಿದ್ದು, ತುದಿಯ ಕಡೆಗೆ ಕಿರಿದಾಗಿ 3ಎಂಎಂ ಮತ್ತು 5 ಎಂಎಂ ನಡುವಿನ ವ್ಯಾಸವನ್ನು ಹೊಂದಿತ್ತು ಎಂದು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ.
ಸಾಮಾನ್ಯವಾಗಿ ಪ್ರಾಣಿಗಳಿಗೆ ಬಾಲ ಇರುತ್ತದೆ. ಆದರೆ ಮನುಷ್ಯನಿಗೆ ಬಾಲ ಇರುವುದು ಅಪರೂಪದಲ್ಲಿ ಅಪರೂಪದ ಪ್ರಕರಣವಾಗಿದೆ. ಮಗುವಿನಲ್ಲಿದ್ದ ಬಾಲಕದಲ್ಲಿ ಸ್ನಾಯು, ರಕ್ತನಾಳ, ನರ ಎಲ್ಲವೂ ಇತ್ತು. ಪ್ರಾಣಿಗಳಲ್ಲಿರುವಂತೆ ಮೂಳೆಗಳಿರಲಿಲ್ಲ. ಗರ್ಭಾಶಯದಲ್ಲಿ ಬೆಳವಣಿಗೆ ಹಂತದಲ್ಲಿ ಭ್ರೂಣದ ಬಾಲವಿರುತ್ತದೆಯಾದರೂ ಮೂಳೆಗಳ ರಚನೆಗಾಗಿ ಅದನ್ನು ಒಳಕ್ಕೆ ಎಳೆದುಕೊಳ್ಳುತ್ತದೆ. ಬಹುಶಃ ಅಲ್ಲಿ ತಪ್ಪಾದ ಬೆಳವಣಿಗೆಯಿಂದಾಗಿ ಅದೇ ಬಾಲ ಹೊರಭಾಗದಲ್ಲಿ ರೂಪುಗೊಂಡಿರಬಹುದು ಎಂದು ಶಂಕಿಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಇನ್ನು ವಿಶ್ವದಲ್ಲಿ ಈ ರೀತಿ ಸುಮಾರು 200 ಪ್ರಕರಣ ದಾಖಲಾಗಿದ್ದರೆ, ಮೆಕ್ಸಿಕೋದಲ್ಲಿ ಇದೇ ಮೊದಲ ಪ್ರಕರಣ ಎನ್ನಲಾಗಿದೆ.