ಟೆಕ್ಸಾಸ್, ನ 29 (DaijiworldNews/DB): ಮಗುವಾಗಿದ್ದಾಗ ಅಪಹರಣಗೊಂಡಿದ್ದಾಕೆ ಇದೀಗ ಐದು ದಶಕಗಳ ಬಳಿಕ ಪತ್ತೆಯಾಗಿ ತನ್ನ ಕುಟುಂಬವನ್ನು ಸೇರಿಕೊಂಡಿದ್ದಾಳೆ. ಈ ಅಪರೂಪದ ವಿದ್ಯಾಮಾನ ನಡೆದಿರುವುದು ಯುನೈಟೆಡ್ ಸ್ಟೇಟ್ಸ್ ನ ಫೋರ್ಟ್ ವರ್ತ್ ಪಟ್ಟಣದಲ್ಲಿ.
1971 ಅಪಹರಣಗೊಂಡಿದ್ದ ಮೆಲಿಸ್ದಾ ಶನಿವಾರ ತಾಯಿ, ತಂದೆ ಮತ್ತು ನಾಲ್ವರು ಒಡಹುಟ್ಟಿದವರನ್ನು ಫೋರ್ಟ್ ವರ್ತ್ನ ಚರ್ಚ್ನಲ್ಲಿ ಭೇಟಿಯಾಗಿದ್ದು, 51 ವರ್ಷಗಳ ನಂತರ ಕುಟುಂಬವು ಆಕೆಯನ್ನು ಖುಷಿಯಿಂದಲೇ ಸ್ವಾಗತಿಸಿತು.
ಅಲ್ಟಾ ಅಪಾಂಟೆನ್ಕೊ ಎಂಬಾಕೆ ಉದ್ಯೋಗಿಯಾಗಿದ್ದರಿಂದ ತನ್ನ ಮಗು ನೋಡಿಕೊಳ್ಳಲು ಕೆಲಸಕ್ಕೆ ಜನ ಬೇಕೆಂದು ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದರು. ಈ ಜಾಹೀರಾತು ನೋಡಿ ಬಂದ ಮಹಿಳೆಯೊಬ್ಬಳ ಪೂರ್ವಾಪರ ವಿಚಾರಿಸದೆ ಮಗುವನ್ನು ನೋಡಿಕೊಳ್ಳಲೆಂದು ಅಲ್ಟಾ ನೇಮಕ ಮಾಡಿದ್ದರು. ಆದರೆ ಅಲ್ಟಾ ಕೆಲಸಕ್ಕೆ ತೆರಳಿದ್ದ ವೇಳೆ ಮಗುವನ್ನು ಆ ಮಹಿಳೆ ಅಪಹರಣಗೈದಿದ್ದಳು. ಮಗುವಿಗಾಗಿ ಎಲ್ಲೆಡೆ ಹುಡುಕಾಡಿದರೂ ಆಕೆ ಪತ್ತೆಯಾಗಿರಲಿಲ್ಲ.
ಐದು ದಶಕಗಳ ಬಳಿಕ ಕಳೆದ ಸೆಪ್ಟಂಬರ್ನಲ್ಲಿ ಮೆಲಿಸ್ಸಾ ಇರುವಿಕೆಯ ಬಗ್ಗೆ ಸುಳಿವು ಸಿಕ್ಕಿತ್ತು.ಫೋರ್ಟ್ ವರ್ತ್ನಿಂದ 1,100 ಮೈಲುಗಳಿಗಿಂತ ಹೆಚ್ಚು ದೂರದಲ್ಲಿರುವ ಚಾರ್ಲ್ಸ್ಟನ್ ಬಳಿ ಮೆಲಿಸ್ಸಾ ಇರುವುದಾಗಿ ಲಭಿಸಿದ ಸುಳಿವಿನ ಮೇರೆಗೆ ಆಕೆಯನ್ನು ಕರೆ ತಂದು ಡಿಎನ್ಎ ಪರೀಕ್ಷೆ ನಡೆಸಲಾಯಿತು. ಪರೀಕ್ಷೆಯ ಫಲಿತಾಂಶ, ಆಕೆಯ ದೇಹದ ಮೇಲಿದ್ದ ಮಚ್ಚೆ, ಜನ್ಮ ದಿನದ ಸಹಕಾರದಿಂದ ಆಕೆಯನ್ನು ತಮ್ಮ ಮಗಳೆಂದು ಕುಟುಂಬ ಸಾಬೀತುಪಡಿಸಿದ ಹಿನ್ನೆಲೆಯಲ್ಲಿ ಕುಟುಂಬಕ್ಕೆ ಆಕೆಯನ್ನು ಹಸ್ತಾಂತರಿಸಲಾಯಿತು ಎಂದು ಮಾಧ್ಯಮವೊಂದು ವರದಿ ಮಾಡಿದೆ.