ಪ್ಯಾರಿಸ್, ಡಿ 04 (DaijiworldNews/DB): ಜಿ 20 ಅಧ್ಯಕ್ಷ ಸ್ಥಾನ ವಹಿಸಿಕೊಂಡಿರುವ ಭಾರತದ ನಾಯಕತ್ವದ ಬಗ್ಗೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ನನ್ನ ಸ್ನೇಹಿತ, 'ಒಂದು ಭೂಮಿ. ಒಂದು ಕುಟುಂಬ. ಒಂದು ಭವಿಷ್ಯ ಪರಿಕಲ್ಪನೆಯಲ್ಲಿ ಭಾರತವು ಜಿ 20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಶಾಂತಿ ಮತ್ತು ಸುಸ್ಥಿರ ಜಗತ್ತು ನಿರ್ಮಾಣಕ್ಕೆ ಎಲ್ಲರನ್ನೂ ಒಗ್ಗೂಡಿಸುತ್ತಾರೆಂಬ ನಂಬಿಕೆ ನನಗಿದೆ ಎಂದಿದ್ದಾರೆ.
ಇನ್ನು ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಅವರೂ ಭಾರತದ ಜಿ 20 ನಾಯಕತ್ವಕ್ಕೆ ಅಭಿನಂದನೆ ಸಲ್ಲಿಸಿದ್ದು, ರಾಜತಾಂತ್ರಿಕ ಮಾತುಕತೆ ಉತ್ತೇಜನಕ್ಕೆ ಮತ್ತು ಒಮ್ಮತ ಸೃಷ್ಟಿಸಲು, ವಿಶ್ವದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಭಾರತದ ನಾಯಕತ್ವದಲ್ಲಿ ನನಗೆ ಸಂಪೂರ್ಣ ವಿಶ್ವಾಸವಿದೆ ಎಂದು ಬರೆದುಕೊಂಡಿದ್ದಾರೆ.
ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್, ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಸಹಿತ ಹಲವರು ಭಾರತದ ನಾಯಕತ್ವದ ಮೇಲೆ ನಂಬಿಕೆ ಹೊಂದಿರುವುದಾಗಿ ಟ್ವೀಟ್ ಮಾಡಿದ್ದಾರೆ. ಡಿಸೆಂಬರ್ 1ರಂದು ಮುಂದಿನ ಒಂದು ವರ್ಷಗಳಿಗಾಗಿ ಭಾರತವು ಜಿ 20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ.