ಐರ್ಲೆಂಡ್, ಡಿ 06 (DaijiworldNews/DB): ಅಧಿಕ ಕೆಲಸದೊತ್ತಡ, ಕಡಿಮೆ ಸಂಬಳ ಎಂದು ಉದ್ಯೋಗದಾತ ಸಂಸ್ಥೆಗಳ ವಿರುದ್ದ ನಿಲ್ಲುವವರೇ ಹೆಚ್ಚು. ಅಂತಹುದರಲ್ಲಿ ಇಲ್ಲೊಬ್ಬ ವ್ಯಕ್ತಿ ಕೋಟಿ ಸಂಬಳ ನೀಡುವ ಸಂಸ್ಥೆ ಕೆಲಸವನ್ನೇ ನೀಡುತ್ತಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿದ ವಿಚಿತ್ರ ಪ್ರಸಂಗ ನಡೆದಿದೆ.
ಐರ್ಲೆಂಡ್ನ ಐರಿಷ್ ರೈಲ್ನಲ್ಲಿ ಉದ್ಯೋಗಿಯಾಗಿರುವ ಡೆರ್ಮೋಟ್ ಅಲೆಸ್ಟರ್ ಮಿಲ್ಸ್ ಎಂಬಾತನೇ ಕೋಟಿ ರೂ. ಸಂಬಳ ನೀಡುತ್ತಿರುವ ಸಂಸ್ಥೆ ಕೆಲಸವನ್ನೇ ನೀಡುತ್ತಿಲ್ಲ ಎಂದು ಕೋರ್ಟ್ ಮೊರೆ ಹೋದಾತ.
ಐರಿಷ್ ರೈಲ್ನಲ್ಲಿ ಹಣಕಾಸು ಅಧಿಕಾರಿಯಾಗಿರುವ ಮಿಲ್ಸ್ಗೆ ವಾರ್ಷಿಕ1.03 ಕೋಟಿ ರೂ. ವೇತನವಿದೆ. ಆದರೆ ಕೆಲಸ ಕಡಿಮೆಯಿದೆ. ತನಗೆ ವಾರ್ಷಿಕ ಕೋಟಿ ರೂ. ಸಂಬಳ ನೀಡಿದರೂ ಕೆಲಸ ನೀಡದೇ ಸುಮ್ಮನೇ ದಿನದೂಡುವಂತೆ ಮಾಡುತ್ತಾರೆ ಎಂದು ಈ ವ್ಯಕ್ತಿ ತನ್ನ ಸಂಸ್ಥೆಯನ್ನು ಕೋರ್ಟ್ ಮೆಟ್ಟಿಲೇರಿಸಿದ್ದಾನೆ.
ಪ್ರತಿ ದಿನ ಕಚೇರಿಯಲ್ಲಿ ಹತ್ತು ಗಂಟೆ ಕಳೆಯುತ್ತೇನೆ. ಎರಡು ದಿನಪತ್ರಿಕೆ ಓದಿ, ಸ್ಯಾಂಡ್ವಿಚ್ ತಿಂದು ವಾಕಿಂಗ್ ಮಾಡಿ ಬೆಳಗ್ಗೆ 10.30ರ ನಂತರ ಕೆಲಸ ಸಂಬಂಧಿತ ಮೇಲ್ಗಳೇನಾದರೂ ಇದ್ದಲ್ಲಿ ಉತ್ತರಿಸುತ್ತೇನೆ. ಕಳೆದ ಒಂಬತ್ತು ವರ್ಷದ ಹಿಂದೆ ಕಂಪೆನಿ ಲೆಕ್ಕಾಚಾರದ ಬಗ್ಗೆ ಪ್ರಶ್ನಿಸಿದ್ದಕ್ಕೆ ನನಗೆ ದಂಡ ವಿಧಿಸಿದ್ದು, ಆ ಬಳಿಕ ಯಾವುದೇ ಕೆಲಸ ನೀಡದೇ ಸುಮ್ಮನೇ ಕಚೇರಿಯಲ್ಲಿರುವಂತೆ ಸತಾಯಿಸುತ್ತಿದ್ದಾರೆ ಎಂದು ಅವರು ಕೋರ್ಟ್ ಮುಂದೆ ಅಳಲು ತೋಡಿಕೊಂಡಿದ್ದಾರೆ. ಸೂಕ್ತ ಕೆಲಸವನ್ನು ನನಗೆ ವಹಿಸಿದ್ದಲ್ಲಿ ಕ್ರಿಯಾಶೀಲತೆಯಿಂದ ಕೆಲಸ ಮಾಡುವುದಾಗಿ ಹೇಳಿದ್ದಾರೆ.