ವಾಷಿಂಗ್ಟನ್, ಡಿ 07 (DaijiworldNews/DB): ತೆರಿಗೆ ವಂಚನೆ ಆರೋಪದಡಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುಟುಂಬದ ಒಡೆತನದಲ್ಲಿರುವ ಸಂಸ್ಥೆಗಳಿಗೆ ನ್ಯಾಯಾಲಯ ದಂಡ ವಿಧಿಸಿದೆ.
ಟ್ರಂಪ್ ಆರ್ಗನೈಸೆಷನ್ ಮತ್ತು ಟ್ರಂಪ್ ಪೇರೋಲ್ ಕಾರ್ಪ್ಗಳ ಮೇಲೆ ತೆರಿಗೆ ವಂಚನೆ ಆರೋಪ ಕೇಳಿ ಬಂದು, ಈ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ನ್ಯಾಯಾಲಯದಲ್ಲಿ ಆರೋಪ ಸಾಬೀತಾಗಿದ್ದು, ಟ್ರಂಪ್ ಒಡೆತನದ ಕಂಪೆನಿಗಳಿಗೆ ನ್ಯಾಯಾಲಯ ದಂಡ ವಿಧಿಸಿದೆ. ಆದರೆ ದಂಡದ ಮೊತ್ತ ತಿಳಿದು ಬಂದಿಲ್ಲ.
ವ್ಯವಹಾರದ ಬಗ್ಗೆ ಅಸಮರ್ಪಕ ಮಾಹಿತಿ, ಅಪಾರ್ಟ್ಮೆಂಟ್, ಐಷಾರಾಮಿ ಕಾರುಗಳ ಮೇಲಿನ ತೆರಿಗೆಯನ್ನು ತಪ್ಪಿಸಿಕೊಳ್ಳಲು ಅಧಿಕಾರಿಗಳಿಗೆ ಸಹಾಯ ಮಾಡಿದ ಆರೋಪ ಅವರ ಮೇಲಿತ್ತು.
ಇನ್ನು ತೆರಿಗೆ ವಂಚನೆ ಪ್ರಕರಣ ಸಾಬೀತಾಗಿರುವುದರಿಂದ ಅಮೆರಿಕದ ಮುಂದಿನ ಅಧ್ಯಕ್ಷೀಯ ಚುನಾವಣೆಗೆ ಈಗಾಗಲೇ ತಮ್ಮ ಸ್ಪರ್ಧೆಯನ್ನು ಘೋಷಿಸಿರುವ ಟ್ರಂಪ್ಗೆ ಬಹುದೊಡ್ಡ ಹಿನ್ನಡೆಯಾಗಲಿದೆ ಎನ್ನಲಾಗುತ್ತಿದೆ. ಆದರೆ ಈ ಆರೋಪ ರಾಜಕೀಯ ಪ್ರೇರಿತವಾಗಿದೆ ಎಂದಿರುವ ಟ್ರಂಪ್ ಕೋರ್ಟ್ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.