ನವದೆಹಲಿ, ಡಿ 10 (DaijiworldNews/HR): ಫಿಫಾ ವರ್ಲ್ಡ್ ಕಪ್ 2022 ಆರಂಭದಲ್ಲಿ ಪಂದ್ಯವೊಂದಕ್ಕೆ ಕಾಮನಬಿಲ್ಲು ಟಿ-ಶರ್ಟ್ ಧರಿಸಿಕೊಂಡು ಬಂದು ಸಿಬ್ಬಂದಿಗಳಿಂದ ಪ್ರವೇಶಕ್ಕೆ ತಡೆಯಾದ ಅಮೇರಿಕಾದ ಪತ್ರಕರ್ತ ಗ್ರಾಂಟ್ ವಾಲ್ ಫುಟ್ ಬಾಲ್ ಪಂದ್ಯ ನಡೆಯುವಾಗಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮಾಜಿ ಸ್ಪೋರ್ಟ್ಸ್ ಇಲಸ್ಟ್ರೇಟೆಡ್ ಪತ್ರಕರ್ತ ಗ್ರಾಂಟ್ ವಾಲ್ ಅವರನ್ನು ಅಲ್ ರಯಾನ್ ನಲ್ಲಿರುವ ಅಹ್ಮದ್ ಬಿನ್ ಅಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ವೇಲ್ಸ್ ವಿರುದ್ಧದ ಅಮೇರಿಕಾ ಪಂದ್ಯಕ್ಕೆ ಪ್ರವೇಶ ನಿರಾಕರಿಸಲಾಗಿದ್ದು, ಆ ಬಳಿಕ ಅವರನ್ನು ಸಿಬ್ಬಂದಿಗಳು ವಶಕ್ಕೆ ಪಡೆದಿದ್ದರು.
ಇನ್ನು ಸಲಿಂಗ ಸಂಬಂಧಗಳು ಕಾನೂನು ಬಾಹಿರವಾಗಿರುವ ದೇಶದಲ್ಲಿ ಎಲ್ಜಿಬಿಟಿಕ್ಯು ಸಮುದಾಯವನ್ನು ಬೆಂಬಲಿಸಲು ಕಾಮನಬಿಲ್ಲು ಶರ್ಟ್ ಧರಿಸಿ ಕತಾರ್ ನ ವಿಶ್ವಕಪ್ ಕ್ರೀಡಾಂಗಣಕ್ಕೆ ಪ್ರವೇಶಿಸಲು ಅವರು ಯತ್ನಿಸಿದ್ದರು.
ಅರ್ಜೆಂಟೀನ ಹಾಗೂ ನೆದರ್ಲೆಂಡ್ಸ್ ನಡುವಣ ಕ್ವಾರ್ಟರ್ ಫೈನಲ್ ಪಂದ್ಯದ ವರದಿ ಮಾಡುವ ವೇಳೆ ಗ್ರಾಂಟ್ ವಾಲ್ (48) ಕುಸಿದು ಬಿದ್ದು ಮೃತ ಪಟ್ಟಿದ್ದಾರೆ.