ಬಲೂಚಿಸ್ತಾನ, ಡಿ12 ( DaijiworldNews/MS): ಅಫ್ಗಾನಿಸ್ತಾನದ ಪಡೆಗಳು ಭಾನುವಾರ ರಾತ್ರಿ ಪಾಕಿಸ್ತಾನದ ಬಲೂಚ್ ಪ್ರಾಂತ್ಯದ ಗಡಿಯಲ್ಲಿ ಗುಂಡಿನ ದಾಳಿ ನಡೆಸಿದ್ದು, ಇದರ ಪರಿಣಾಮ 6 ನಾಗರಿಕರು ಮೃತಪಟ್ಟಿದ್ದಾರೆ ಎಂದು ಪಾಕಿಸ್ತಾನದ ಸೇನೆ ಹೇಳಿಕೊಂಡಿದೆ.
ಯಾವುದೇ ಪ್ರಚೋದನೆ ಇಲ್ಲದ ಚಮಾನ್ ಜಿಲ್ಲೆಯ ಬಳಿ ನಡೆದ ಈ ಗುಂಡಿನ ದಾಳಿಯಲ್ಲಿ 17ಕ್ಕೂ ಅಧಿಕ ನಾಗರಿಕರು ಗಾಯಗೊಂಡಿದ್ದಾರೆ ಎಂದು ಸೇನೆ ಹೇಳಿದೆ.
‘ಅಫ್ಗನ್ ಪಡೆಯ ಅಪ್ರಚೋದಿತ ಆಕ್ರಮಣಕಾರಿ ದಾಳಿಗೆ ತಕ್ಕ ಪ್ರತಿಕ್ರಿಯೆಯನ್ನು ಪಾಕಿಸ್ತಾನದಿಂದ ನೀಡಲಾಗಿದೆ. ಆದರೆ, ನಾಗರಿಕರನ್ನು ಗುರಿಯಾಗಿಸಿಲ್ಲ’ಎಂದು ಪಾಕ್ ಮಿಲಿಟರಿ ತಿಳಿಸಿದೆ.
‘ಕಾಬೂಲ್ ಅಧಿಕಾರಿಗಳನ್ನೂ ಸಂಪರ್ಕಿಸಿರುವ ಪಾಕಿಸ್ತಾನದ ಮಿಲಿಟರಿ, ಪರಿಸ್ಥಿತಿಯ ಗಂಭೀರತೆ ಬಗ್ಗೆ ವಿವರಿಸಿದ್ದು, ಇಂತಹ ಪರಿಸ್ಥಿತಿ ಮರುಕಳಿಸದಂತೆ ನೋಡಿಕೊಳ್ಳಲು ನಿರ್ದಾಕ್ಷಿಣ್ಯ ಕ್ರಮಕ್ಕೆ ಒತ್ತಾಯಿಸಿದೆ’ಎಂದು ಅದು ತಿಳಿಸಿದೆ. ಅಫ್ಗಾನ್ ಪಡೆಗಳು ಪಾಕಿಸ್ತಾನ ಗಡಿಯ ತಂತಿ ಬೇಲಿ ಕತ್ತರಿಸಲು ಮುಂದಾದಾಗ ಸಂಘರ್ಷ ಭುಗಿಲೆದ್ದಿದೆ ಎಂದು ಪಾಕ್ ಗಡಿ ಭದ್ರತಾ ಪಡೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಸಂಘರ್ಷದಲ್ಲಿ ಒಬ್ಬ ತಾಲಿಬಾನ್ ಸೈನಿಕ ಮೃತಪಟ್ಟಿದ್ದಾನೆ ಎಂದು ಅವರು ತಿಳಿಸಿದ್ದಾರೆ.