ಲಂಡನ್, ಡಿ 16 (DaijiworldNews/DB): 2500 ವರ್ಷಗಳಷ್ಟು ಹಳೆಯದಾದ ಸಂಸ್ಕೃತ ವ್ಯಾಕರಣದ ಕ್ಲಿಸ್ಟಕರ ಸಮಸ್ಯೆಯೊಂದನ್ನು ಕೇಂಬ್ರಿಡ್ಜ್ ವಿವಿಯಲ್ಲಿನ ಭಾರತೀಯ ಮೂಲದ ಪಿಎಚ್ಡಿ ವಿದ್ಯಾರ್ಥಿಯೊಬ್ಬ ಸಲೀಸಾಗಿ ಬಗೆಹರಿಸಿದ್ದಾನೆ. ವಿದ್ವಾಂಸರಿಂದ ಅಸಾಧ್ಯವಾದದನ್ನು ಸಾಧ್ಯವಾಗಿಸಿದ್ದಕ್ಕೆ ಈ ವಿದ್ಯಾರ್ಥಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಕೇಂಬ್ರಿಡ್ಜ್ ನ ಸೇಂಟ್ ಜಾನ್ಸ್ ಕಾಲೇಜಿನಲ್ಲಿ ಏಷ್ಯನ್ ಮತ್ತು ಮಧ್ಯಪ್ರಾಚ್ಯ ಅಧ್ಯಯನಗಳ ಪಿಎಚ್ಡಿ ವಿದ್ಯಾರ್ಥಿಯಾಗಿರುವ ರಿಷಿ ಅತುಲ್ ರಾಜ್ ಪೋಪಟ್ (27) ಅವರೇ ಈ ಸಾಧನೆ ತೋರಿದ ಸಂಶೋಧನಾ ವಿದ್ಯಾರ್ಥಿ. ಕ್ರಿ.ಪೂ. 5ನೇ ಶತಮಾನದಲ್ಲಿ ವಾಸಿಸುತ್ತಿದ್ದ ಪ್ರಾಚೀನ ಸಂಸ್ಕೃತ ಭಾಷೆಯ ಪಾಣಿನಿ ಅವರು ಬರೆದ ಪಠ್ಯವನ್ನು ಇದೀಗ ರಿಷಿ ಅತುಲ್ ರಾಜ್ ಡಿಕೋಡ್ ಮಾಡುವ ಮೂಲಕ ಅಲ್ಲಿಂದ ಇಲ್ಲಿವರೆಗೆ ಇದ್ದ ವ್ಯಾಕರಣ ಸಮಸ್ಯೆಯೊಂದನ್ನು ಸಲೀಸಾಗಿ ಬಗೆ ಹರಿಸಿದ್ದಾರೆ. ವಿಶೇಷವೆಂದರೆ ಇಲ್ಲಿವರೆಗೆ ಯಾವ ವಿದ್ವಾಂಸರಿಗೂ ಸಮಸ್ಯೆ ಬಗೆಹರಿಸಲು ಸಾಧ್ಯವಾಗದಿದ್ದುದು.
ಪಾಣಿನಿ ಮೆಟಾರೂಲ್ನ್ನು ಕಲಿಸಿದರು. ಆದರೆ ಇದನ್ನು ವಿದ್ವಾಂಸರು ಸಮಾನ ಸಾಮರ್ಥ್ಯದ ಎರಡು ನಿಯಮಗಳ ನಡುವಿನ ಸಂಘರ್ಷದ ವೇಳೆ ವ್ಯಾಕರಣದ ಸರಣಿ ಕ್ರಮದಲ್ಲಿ ನಂತರ ಬರುವ ನಿಯಮ ಗೆಲ್ಲುತ್ತದೆ ಎಂದೇ ಅರ್ಥೈಸುತ್ತಾರೆ. ಆದರೆ ವ್ಯಾಕರಣದ ತಪ್ಪು ಫಲಿತಾಂಶಕ್ಕೆ ಈ ವಿಚಾರವು ಕಾರಣವಾಯಿತು. ಹಾಗಾಗಿ ಮೆಟಾರುಲ್ನ ಈ ಸಾಂಪ್ರದಾಯಿಕ ವ್ಯಾಖ್ಯಾನವನ್ನು ತಿರಸ್ಕರಿಸಿದ ರಿಷಿ, ಪಾಣಿನಿಯ ವ್ಯಾಖ್ಯಾನವನ್ನು ಬೇರೆಯದೇ ರೀತಿಯಲ್ಲಿ ವಿವರಿಸಿದ್ದಾರೆ. ಪದದ ಎಡ ಮತ್ತು ಬಲ ಬದಿಗಳಿಗೆ ಅನುಕ್ರಮವಾಗಿ ಅನ್ವಯವಾಗುವ ನಿಯಮಗಳ ನಡುವೆ ಬಲಭಾಗಕ್ಕೆ ಅನ್ವಯವಾಗುವ ನಿಯಮಗಳನ್ನು ಅನುಸರಿಸಬೇಕು ಎಂಬುದೇ ಪಾಣಿನಿ ಅವರ ಆಕಾಂಕ್ಷೆಯಾಗಿತ್ತು ಎಂದು ರಿಷಿ ವಾದಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ಈ ಸಮಸ್ಯೆಯನ್ನು ಅರ್ಥೈಸಿಕೊಂಡು ಪರಿಹರಿಸಲು ಎರಡು ವರ್ಷ ಬೇಕಾಯಿತು ಎಂದು ರಿಷಿ ಹೇಳಿರುವುದಾಗಿ ವರದಿಯಾಗಿದೆ.