ವಾಷಿಂಗ್ಟನ್, ಡಿ 17 (DaijiworldNews/DB): ತಂತ್ರಜ್ಞಾನಗಳು ಮುಂದುವರಿದಿದ್ದು, ಕೆಲವೊಮ್ಮೆ ಜೀವಕ್ಕೂ ನೆರವಾದ ಪ್ರಸಂಗಗಳನ್ನು ಆಗಾಗ ನೋಡುತ್ತೇವೆ. ಅಮೆರಿಕಾದಲ್ಲಿ ಕಂದಕಕ್ಕೆ ಉರುಳಿದ್ದ ಕಾರು ಪ್ರಯಾಣಿಕರಿಬ್ಬರನ್ನು ಐಫೋನ್ 14 ಮೊಬೈಲ್ ಪ್ರಾಣಾಪಾಯದಿಂದ ಕಾಪಾಡಿದೆ.
ಹೌದು, ಇತ್ತೀಚೆಗೆ ಗರ್ಭಿಣಿಯೊಬ್ಬಳ ರಕ್ತದೊತ್ತಡ ಏರಿಕೆಯಾಗಿರುವುದನ್ನು ಆಕೆಯ ಆಪಲ್ ವಾಚ್ ಪತ್ತೆಹಚ್ಚಿ ಸಂದೇಶ ನೀಡಿತ್ತು. ಇದೀಗ ಅದೇ ರೀತಿಯಲ್ಲಿ ಐಫೋನ್ 14 ಮೊಬೈಲ್ ಕೂಡಾ ಇಬ್ಬರು ಯುವಕರನ್ನು ಪ್ರಾಣಾಪಾಯದಿಂದ ರಕ್ಷಿಸಿದೆ. ಅಮೆರಿಕಾದ ಗ್ರ್ಯಾಂಡ್ ಕ್ಯಾನ್ಯನ್ ಪ್ರದೇಶದಲ್ಲಿ ನಿಯಂತ್ರಣ ತಪ್ಪಿದ ಕಾರೊಂದು ಸುಮಾರು 300 ಅಡಿ ಆಳಕ್ಕೆ ಬಿದ್ದಿತ್ತು. ಈ ವೇಳೆ ಅಲ್ಲಿ ಕರೆ ಮಾಡಲು ನೆಟ್ವರ್ಕ್ ಇಲ್ಲದ ಕಾರಣ ಯುವಕರಿಬ್ಬರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು. ಗಾಯಾಳುಗಳಾಗಿದ್ದ ಇಬ್ಬರೂ ಏನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಆದರೆ ಅವರಲ್ಲಿದ್ದ ಐಫೋನ್ 14 ಮೊಬೈಲ್ ಈ ವೇಳೆ ಕೆಲಸ ಮಾಡಿತ್ತು.
ಅಪಘಾತದ ರಭಸಕ್ಕೆ ಐಫೋನ್ 14 ಮೊಬೈಲ್ನಲ್ಲಿದ್ದ ಕ್ರ್ಯಾಶ್ ಪತ್ತೆ ಡಿಟೆಕ್ಷನ್ ತೆರೆದುಕೊಂಡಿದೆ. ಇದು ಕೂಡಲೇ ಆ್ಯಪಲ್ ಕೇಂದ್ರಕ್ಕೆ ಸ್ಯಾಟಲೈಟ್ ಸಂದೇಶ ಕಳುಹಿಸಿದೆ. ಅಲ್ಲಿಂದ ತತ್ಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ರವಾನೆಯಾಗಿದೆ. ಕೂಡಲೇ ಅಧಿಕಾರಿಗಳು ಬಂದು ಹೆಲಿಕಾಪ್ಟರ್ ಮುಖಾಂತರ ರಕ್ಷಣಾ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ರಕ್ಷಣಾ ಕಾರ್ಯಾಚರಣೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.