ನ್ಯೂಯಾರ್ಕ್, ಡಿ 19 (DaijiworldNews/DB): ಟ್ವಿಟರ್ ಮುಖ್ಯಸ್ಥ ಸ್ಥಾನದಿಂದ ನಾನು ಕೆಳಗಿಳಿಯಬೇಕೇ? ಎಂಬುದಾಗಿ ಸ್ವತಃ ಟ್ವಿಟರ್ ಮಾಲಕ ಎಲಾನ್ ಮಸ್ಕ್ ಬಳಕೆದಾರರನ್ನು ಪ್ರಶ್ನಿಸಿದ್ದಾರೆ. ಮಾತ್ರವಲ್ಲ ಈ ವಿಚಾರವಾಗಿ ಸಮೀಕ್ಷೆ ಕೂಡಾ ಆರಂಭಿಸಿದ್ದಾರೆ.
ಟ್ವಿಟರ್ ಸಂಸ್ಥೆಯನ್ನು ಮಸ್ಕ್ ಖರೀದಿಸಿದ ನಂತರ ಪದೇ ಪದೇ ಸಂಸ್ಥೆ ಸುದ್ದಿಯಲ್ಲಿದೆ. ಸಾವಿರಾರು ಮಂದಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿರುವುದು, ಬ್ಲೂ ಟಿಕ್ಗೆ ಶುಲ್ಕ ವಿಧಿಸುವ ಘೋಷಣೆ ಸೇರಿದಂತೆ ಸಂಸ್ಥೆಯೊಳಗೆ ಸಾಕಷ್ಟು ಬದಲಾವಣೆಗಳನ್ನೂ ಮಾಡಲಾಗಿದೆ. ಇದೀಗ ತನ್ನ ಮಾಲಕತ್ವದ ಬಗ್ಗೆಯೇ ಅವರು ಬಳಕೆದಾರರನ್ನು ಪ್ರಶ್ನೆ ಎತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.
ನಾನು ಟ್ವಿಟರ್ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಬೇಕೇ ಎಂಬುದಾಗಿ ಟ್ವಿಟರ್ನಲ್ಲಿ ಬಳಕೆದಾರರನ್ನು ಪ್ರಶ್ನಿಸಿದ್ದಾರೆ. ಅಲ್ಲದೆ ಬಳಕೆದಾರರ ಅಭಿಪ್ರಾಯ ಪಡೆಯಲು ಟ್ವಿಟರ್ನಲ್ಲೇ ಸಮೀಕ್ಷೆಯನ್ನು ಆರಂಭಿಸಿರುವ ಅವರು ಯೆಸ್ ಅಥವಾ ನೋ ಎಂಬ ಆಯ್ಕೆಗಳನ್ನು ನೀಡಿದ್ದಾರೆ. ಈವರೆಗೆ 13991540 ಮಂದಿ ಅಭಿಪ್ರಾಯಗಳನ್ನು ನೀಡಿದ್ದು, ಇನ್ನೂ ಮೂರು ಗಂಟೆಗಳು ಅಭಿಪ್ರಾಯ ವ್ಯಕ್ತಪಡಿಸಲು ಬಾಕಿ ಉಳಿದಿದೆ. ನಾಳೆ ಬೆಳಗ್ಗೆ ಈ ಸಮೀಕ್ಷೆಯ ನಿಖರ ಫಲಿತಾಂಶ ಗೊತ್ತಾಗಲಿದೆ ಎಂದು ತಿಳಿದು ಬಂದಿದೆ.