ದುಬೈ, ಡಿ 20 (DaijiworldNews/DB): ತಂತ್ರಜ್ಞಾನ ಯುಗವು ಮಾನವಶ್ರಮಕ್ಕೆ ವಿರಾಮ ಹಾಕುತ್ತಿದೆ. ಇದಕ್ಕೆ ಪೂರಕವೆಂಬಂತೆ ವಿಶ್ವದ ಮೊದಲ ಸೂಪರ್ ಮಾಡೆಲ್ ರೋಬೋಟ್ವೊಂದು ಕೆಫೆಯಲ್ಲಿ ಗ್ರಾಹಕರನ್ನು ಉಪಚರಿಸಲು ಬರುತ್ತಿದ್ದಾಳೆ. ಆದರೆ ಈಕೆಯ ಸೇವೆ ಪಡೆಯಬೇಕಾದರೆ ನೀವು ದುಬೈಗೆ ಭೇಟಿ ನೀಡಲೇಬೇಕು.
ಹೌದು. 2023ರಲ್ಲಿ ದುಬೈಯಲ್ಲಿ ಡೊನ್ನಾ ಸೈಬರ್-ಕೆಫೆಯು ಸೂಪರ್ ಮಾಡೆಲ್ ರೋಬೋಟ್ ಸೇವೆಯೊಂದಿಗೆ ಆರಂಭವಾಗಲಿದೆ. ಇದು ಗ್ರಾಹಕರನ್ನು ಉಪಚರಿಸುವ ವಿಶ್ವದ ಮೊದಲ ಸೂಪರ್ ಮಾಡೆಲ್ ರೋಬೋಟ್ ಆಗಿಯೂ ಗಮನ ಸೆಳೆಯಲಿದೆ. ಪೂರ್ವ ಯುರೋಪಿಯನ್ ಮಾಡೆಲ್ ಡಯಾನಾ ಗ್ಯಾಬ್ದುಲ್ಲಿನಾ ಅವರನ್ನು ಹೋಲುವಂತಹ ಮಾದರಿಯಲ್ಲೇ ಈ ರೋಬೋಟ್ನ್ನು ಸಿದ್ದಪಡಿಸಲಾಗಿದೆ. ಮಾನವನ ಸಹಾಯವಿಲ್ಲದೆ ಕಾರ್ಯನಿರ್ವಹಿಸಲಿದೆ.
ಈ ಕೆಫೆಯಲ್ಲಿ ಸ್ವಯಂ ಸೇವೆಯ ಐಸ್ಕ್ರೀಮ್ ಯಂತ್ರಗಳಿರುತ್ತವೆ. ಅಲ್ಲದೆ ಗ್ರಾಹಕರಿಗೆ ಕಾಫಿ ಮತ್ತಿತರ ಸೇವೆಗಳನ್ನು ಸರಬರಾಜು ಮಾಡಲು ಸೂಪರ್ ಮಾಡೆಲ್ ರೋಬೋಟ್ ಬಳಕೆಯಾಗುತ್ತದೆ. ವಿಶೇಷವೆಂದರೆ ಗ್ರಾಹಕರಿಗೆ ಕೇವಲ ಸೇವೆ ನೀಡುವುದಲ್ಲ, ಅವರೊಂದಿಗೆ ಸೆಲ್ಫೀ ತೆಗೆದುಕೊಳ್ಳುತ್ತದೆ ಮತ್ತು ಚಾಟ್ ಕೂಡಾ ಮಾಡುತ್ತದೆ. ಮನುಷ್ಯರಂತೆಯೇ ನಡೆಯುವ ರೋಬೋಟ್ ಇದಾಗಿದ್ದು, ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತದೆ ಎಂದೂ ವರದಿಗಳು ಹೇಳಿವೆ.
ರೋಬೋಟ್ ತಯಾರಿಸಲು ಬೇಕಾದ ಸಾಮಾಗ್ರಿಗಳನ್ನು ರಷ್ಯಾದಿಂತ ತರಿಸಲಾಗಿದೆ. ರೋಬೋ-ಸಿ2 ಎಂದು ಈ ಸೂಪರ್ ಮಾಡೆಲ್ ರೋಬೋಟ್ನ್ನು ಹೆಸರಿಸಲಾಗಿದ್ದು, ಆರ್ಡಿಐ ರೋಬೋಟಿಕ್ಸ್ ಇದನ್ನು ತಯಾರಿಸಿದೆ.